ಸೈಬರ್ ಅಪರಾಧ (ಸಾಂದರ್ಭಿಕ ಚಿತ್ರ) 
ರಾಜ್ಯ

ಆನ್‌ಲೈನ್ ಲಾಜಿಸ್ಟಿಕ್ಸ್ ಕಂಪನಿಗಳಿಗೆ 90 ಲಕ್ಷ ರೂ. ವಂಚನೆ: ನಾಲ್ವರು ಆರೋಪಿಗಳ ಬಂಧನ

Geo Spoofing ವಿಪಿಎನ್ ಬಳಸಿಕೊಂಡು ಲೊಕೇಷನ್ ಬದಲಿಸಿ ಚಾಲಕನ ಐಡಿಯಿಂದ ಆರ್ಡರ್ ಮುಕ್ತಾಯಗೊಂಡಿರುವಂತೆ ಬಿಂಬಿಸುತ್ತಿದ್ದರು.

ಬೆಂಗಳೂರು: ಜಿಯೋ-ಸ್ಪೂಫಿಂಗ್ ಅಪ್ಲಿಕೇಶನ್ ಬಳಸಿ ನಕಲಿ ಆರ್ಡರ್‌ಗಳನ್ನು ಮಾಡಿ, ಕ್ಯಾನ್ಸಲ್ ಮಾಡುವ ಮೂಲಕ ಆನ್‌ಲೈನ್ ಲಾಜಿಸ್ಟಿಕ್ಸ್ ಕಂಪನಿಗಳಿಗೆ ರೂ.90 ಲಕ್ಷ ವಂಚಿಸಿದ ನಾಲ್ವರು ಆರೋಪಿಗಳನ್ನು ಆಗ್ನೇಯ ಸಿಇಎನ್ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಗಳನ್ನು ಶ್ರೇಯಸ್ (29), ಕೌಶಿಕ್ (26), ರಂಗನಾಥ್ (26), ಆನಂದ್ ಕುಮಾರ್ (30) ಎಂದು ಗುರ್ತಿಸಲಾಗಿದೆ. ಇವರೆಲ್ಲರೂ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಹಾಸನ ಮತ್ತು ಮಂಡ್ಯದಿಂದ ಬಂದವರಾಗಿದ್ದಾರೆ.

ಪೋರ್ಟರ್ ಲಾಜಿಸ್ಟಿಕ್ ಅಪ್ಲಿಕೇಷನ್‍ನಲ್ಲಿ ಗ್ರಾಹಕರು ಹಾಗೂ ಚಾಲಕರ ಹೆಸರಿನಲ್ಲಿ ತಾವೇ ನಕಲಿ ಐಡಿಗಳನ್ನು ಸೃಷ್ಟಿಸುತ್ತಿದ್ದ ಆರೋಪಿಗಳು, ದೂರದ ಸ್ಥಳಗಳಿಗೆ ಆರ್ಡರ್ ಪ್ಲೇಸ್ ಮಾಡುವ ಮೂಲಕ ಚಾಲಕನ ವ್ಯಾಲೆಟ್‍ಗೆ ಹಣ ಪಾವತಿಸುತ್ತಿದ್ದರು.

ವ್ಯಾಲೆಟ್‍ಗೆ ಪಾವತಿಸಿದ ಹಣವನ್ನು ತಕ್ಷಣವೇ ಪುನಃ ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದರು. ನಂತರ Geo Spoofing ವಿಪಿಎನ್ ಬಳಸಿಕೊಂಡು ಲೊಕೇಷನ್ ಬದಲಿಸಿ ಚಾಲಕನ ಐಡಿಯಿಂದ ಆರ್ಡರ್ ಮುಕ್ತಾಯಗೊಂಡಿರುವಂತೆ ಬಿಂಬಿಸುತ್ತಿದ್ದರು.

ಮತ್ತೊಂದೆಡೆ, ಗ್ರಾಹಕರ ಐಡಿಯಿಂದ ಆರ್ಡರ್ ಕ್ಯಾನ್ಸಲ್ ಆಗಿರುವುದಾಗಿ ಬಿಂಬಿಸಿ, ರಿಫಂಡ್ ಸಹ ಪಡೆದುಕೊಳ್ಳುತ್ತಿದ್ದರು. ಇದೇ ರೀತಿ 8 ತಿಂಗಳಿಂದ ಒಟ್ಟು 90 ಲಕ್ಷ ರೂ. ವಂಚಿಸಿದ್ದರು.

ಇದನ್ನು ಮನಗಂಡ ಪೋರ್ಟರ್ ಕಂಪೆನಿಯ ಪ್ರತಿನಿಧಿಗಳು ಬೆಂಗಳೂರಿನ ಆಗ್ನೆಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಪೋರ್ಟರ್ ಕಂಪೆನಿಯೊಂದಿಗೆ ಲಗತ್ತಿಸಿದ ನಂಬರ್ ಹಾಗೂ ಮತ್ತಿತರರ ತಾಂತ್ರಿಕ ಮಾಹಿತಿ ಆಧರಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ತನಿಖೆ ಕೈಗೊಂಡ ಪೊಲೀಸರು ಸೆಪ್ಟೆಂಬರ್ 21 ರಂದು ಹಾಸನದಲ್ಲಿ ಶ್ರೇಯಸ್‌ನನ್ನು ಬಂಧಿಸಿದ್ದರು. ಈತನ ವಿಚಾರಣೆ ಬಳಿಕ ಉಳಿದ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದರು. ಆರೋಪಿಗಳು ಬೆಂಗಳೂರಿನಲ್ಲಿದ್ದುಕೊಂಡೇ Geo Spoofing ಮುಖಾಂತರ ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲೂ ಕೂಡ ಇದೇ ರೀತಿ ಪೋರ್ಟರ್ ಕಂಪೆನಿಗೆ ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಧ್ಯ ಫಿಲಿಪೈನ್ಸ್ ಪ್ರದೇಶದಲ್ಲಿ ಪ್ರಬಲ ಭೂಕಂಪ: 31 ಮಂದಿ ಸಾವು

ಉಸಿರಾಟದ ಸಮಸ್ಯೆಯಿಂದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

ಇಂದು ನಾಡಿನಾದ್ಯಂತ ಆಯುಧಪೂಜೆ, ಮಹಾನವಮಿ ಸಂಭ್ರಮ: ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8,500 ರೂ ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು; ವಾರಸುದಾರರಿಗೆ ಪರಿಹಾರ ವಿತರಣೆ: ಸಿಎಂ ಸಿದ್ದರಾಮಯ್ಯ

SCROLL FOR NEXT