ಬೆಂಗಳೂರು: ನನಗೆ ಯಾರೂ ಸಹೋದರಿ ಇಲ್ಲ. ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಶಿಯವರು ಸ್ಪಷ್ಟನೆ ನೀಡಿದ್ದಾರೆ.
ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಮೊದಲನೆಯದಾಗಿ ನನಗೆ ಯಾರೂ ಸಹೋದರಿ ಇಲ್ಲ. ಇನ್ನು, ನನ್ನ ತಾಯಿಗೆ ಗೋಪಾಲ್ ಜೋಶಿ ಸೇರಿ ನಾಲ್ವರು ಮಕ್ಕಳು. ಆದರೆ, ಗೋಪಾಲ್ ಜೋಶಿ ಅವರೊಂದಿಗೆ ಕಳೆದ 32 ವರ್ಷಗಳಿಂದ ತಮ್ಮ ಸಂಪರ್ಕ, ಸಂಬಂಧವಿಲ್ಲ. ಗೋಪಾಲ್ ಜೋಶಿ ಮಾತ್ರವಲ್ಲ, ಯಾರೇ ತಮ್ಮ ಕೆಲಸ ಕಾರ್ಯಗಳಿಗೆ ನನ್ನ ಹೆಸರು ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಯಾರೊಂದಿಗೂ ನನ್ನ ಹೆಸರು ಉಲ್ಲೇಖಿಸದಂತೆ 2013ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಾಲದ ಅಫಿಡವಿಟ್ ನಲ್ಲಿ ಅದರ ವಿವರವಿದೆ. ಇನ್ನು, ಬೆಂಗಳೂರಿನಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ವಿಜಯಲಕ್ಷ್ಮಿ ನನ್ನ ಸಹೋದರಿ ಎಂದು ಉಲ್ಲೇಖಿಸಿದ್ದಾರೆ. ವಾಸ್ತವವಾಗಿ ನನಗೆ ಸಹೋದರಿಯೇ ಇಲ್ಲ. ಇದನ್ನೆಲ್ಲ, ನೋಡಿದರೆ ಎಲ್ಲ ಬೋಗಸ್ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ, ಗೋಪಾಲ್ ಜೋಶಿ ತಪ್ಪೆಸಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.
ಪ್ರಕರಣ ಹಿಂಪಡೆಯಲಾಗಿದೆ: ಸುನಿತಾ ಚವ್ಹಾಣ್ ಸ್ಪಷ್ಟನೆ
ಏತನ್ಮಧ್ಯೆ ಸಮಸ್ಯೆ ಬಗೆಹರಿದಿದ್ದು, ಪ್ರಕರಣ ಹಿಂಪಡೆಯಲಾಗಿದೆ ದೂರುದಾರರಾದ ಜೆಡಿಎಸ್ ಮಾಜಿ ಶಾಸಕ ದೇವಾನಂದ್ ಚವ್ಹಾಣ್ ಅವರ ಪತ್ನಿ ಸುನೀತಾ ಚವ್ಹಾಣ್ ಅವರು ಹೇಳಿದ್ದಾರೆ.
ಇದೇ ವೇಳೆ ಪ್ರಕಱಣ ಮೂವರನ್ನು ಬಂಧಿಸಲಾಗಿದೆ ಎಂಬ ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಯಾರನ್ನು ಬಂಧಿಸಿಲ್ಲ. ಅವರೊಂದಿಗೆ ನನಗೆ ಯಾವುದೇ ದ್ವೇಷವಿಲ್ಲ. ಅವರಿಗೆ ನೀಡಿದ್ದ ಹಣವೂ ಮೂರು-ನಾಲ್ಕು ಮಂದಿಗೆ ಸೇರಿದ್ದು. ಹಣನನ್ನು ಹಿಂತಿರುಗಿಸಲಾಗಿದೆ ಎಂದು ತಿಳಿಸಿದರು.