ಬೆಂಗಳೂರು: ನ್ಯಾಯಾಲಯದ ಅನುಮತಿಯಿಲ್ಲದೆ, ರಾಜ್ಯ ಸರ್ಕಾರವು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2024 ರ ಸೆಕ್ಷನ್ 16 ಮತ್ತು 17 ರ ಅಡಿಯಲ್ಲಿ ಯಾವುದೇ ಕ್ರಮ ಅಥವಾ ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ದಿವಂಗತ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಒಡೆಯರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು ಮಧ್ಯಂತರ ಆದೇಶ ನೀಡಿದ್ದಾರೆ. ಪ್ರಮೋದಾ ದೇವಿ ಅವರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದರು. ವಿಧಾನಸಭೆ ನಿಯಮಗಳಿಗೆ ವಿರುದ್ಧವಾಗಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಜಾರಿಗೊಳಿಸಲಾಗಿದೆಯೇ ಎಂಬುದನ್ನು ಪರಿಗಣಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ದೇವಾಲಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಪ್ರಾಧಿಕಾರ ವಿಲೇವಾರಿ ಮಾಡುವಂತಿಲ್ಲ. ಹಾಲಿ ದೇವಾಲಯದಲ್ಲಿ ಜಾರಿಯಲ್ಲಿರುವ ಸಂಪ್ರದಾಯದಲ್ಲಿ ಬದಲಾವಣೆ ಅಥವಾ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದೆ.
ಅಲ್ಲದೆ, ಪ್ರಾಧಿಕಾರ ಕಾಯಿದೆ ಸೆಕ್ಷನ್ 16 ಅಥವಾ 17ರ ಅಡಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯಬೇಕು. ಅರ್ಜಿ ವಿಲೇವಾರಿ ಬಾಕಿ ಇರುವಾಗ ರಾಜ್ಯ ಸರ್ಕಾರ ನಿಯಮ ರೂಪಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಸಭೆಯಲ್ಲಿ ಭಾಗವಹಿಸುವಂತೆ ಪ್ರಮೋದಾ ದೇವಿ ಅವರಿಗೆ ಪ್ರಾಧಿಕಾರ ನೋಟಿಸ್ ನೀಡಬೇಕು. ಅವರು ಸಭೆಯಲ್ಲಿ ಭಾಗವಹಿಸದಿದ್ದರೆ ಪ್ರಾಧಿಕಾರ ಸೂಕ್ತ ನಿರ್ಧಾರ ಕೈಗೊಳ್ಳಲು ಸ್ವತಂತ್ರವಾಗಿರುತ್ತದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ದೇವದಾಸ್, ಪ್ರಾಧಿಕಾರದ ಸೆಕ್ಷನ್ 17ರ ಅನ್ವಯ ಯಾವುದೇ ರೀತಿಯಲ್ಲೂ ಅರ್ಜಿದಾರರ ಹಕ್ಕುಗಳಿಗೆ ಅಡ್ಡಿ ಮಾಡುವುದಿಲ್ಲ. ಸೆಕ್ಷನ್ 16ರ ಅನ್ವಯ ಎಲ್ಲರಿಗೂ ಸಭೆಯಲ್ಲಿ ಪಾಲ್ಗೊಳ್ಳಲು ನೋಟಿಸ್ ನೀಡಲಾಗುತ್ತದೆ. ಇಲ್ಲಿ ಪ್ರಾಧಿಕಾರದ ಅಧ್ಯಕ್ಷರು (ಮುಖ್ಯಮಂತ್ರಿ) ನಿರ್ಣಯ ಕೈಗೊಂಡರೂ ಅದು ಸಚಿವ ಸಂಪುಟದ ತೀರ್ಮಾನಕ್ಕೆ ಒಳಪಡುತ್ತದೆ. ಪ್ರಾಧಿಕಾರ ಅಥವಾ ಸಿಎಂ ಸೆಕ್ಷನ್ 17ರ ಅನ್ವಯ ಯಾವುದೇ ಅಧಿಕಾರ ಚಲಾಯಿಸಿಲ್ಲ. ಹೀಗಿರುವಾಗ ಅರ್ಜಿದಾರರಿಗೆ ಸಮಸ್ಯೆಯಾದರೆ ಅವರು ಅರ್ಜಿ ಸಲ್ಲಿಸಬಹುದು ಎಂದು ಪೀಠಕ್ಕೆ ವಿವರಿಸಿದರು.
ಈ ವೇಳೆ ಅರ್ಜಿದಾರರ ಪರ ವಕೀಲರು, ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿ. ಅಲ್ಲಿ ಯಾವುದೇ ಅಭಿಪ್ರಾಯಭೇದವಿದ್ದರೆ ಅದು ಸಂಪುಟಕ್ಕೆ ಹೋಗುತ್ತದೆ. ಒಂದೊಮ್ಮೆ ಪ್ರಾಧಿಕಾರದ ಸದಸ್ಯರ ನಡುವೆ ಅಭಿಪ್ರಾಯ ಭೇದ ಉಂಟಾದರೆ ಅದನ್ನು ಮುಖ್ಯಮಂತ್ರಿ ನಿರ್ಧರಿಸಬಾರದು ಎಂಬುದಾಗಿ ನ್ಯಾಯಪೀಠ ಆದೇಶಿಸಬೇಕು. ಅದಕ್ಕೆ ನ್ಯಾಯಪೀಠ, ಮುಖ್ಯಮಂತ್ರಿಯವರು ಸಂಪುಟದ ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು. ನ್ಯಾಯಾಲಯದ ಅನುಮತಿ ಇಲ್ಲದೇ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಆದೇಶಿಸಲಾಗುವುದು ಎಂದಿತು.
ಅರ್ಜಿ ಇತ್ಯರ್ಥವಾಗುವವರೆಗೆ ಪ್ರಾಧಿಕಾರವನ್ನು ವಿಸರ್ಜಿಸಬಾರದು. ಒಮ್ಮೆ ಪ್ರಾಧಿಕಾರ ವಿಸರ್ಜನೆಯಾದರೆ ನಮ್ಮ ಸ್ಥಾನ ಹೋಗುತ್ತದೆ. ಸೆಕ್ಷನ್ 16ರ ಅನ್ವಯ ಪ್ರಾಧಿಕಾರದ ಸದಸ್ಯರ ನಡುವೆ ಒಮ್ಮತ ಮೂಡದಿದ್ದರೆ ನ್ಯಾಯಾಲಯದ ಅನುಮತಿ ಇಲ್ಲದೇ ನಿರ್ಧಾರ ಕೈಗೊಳ್ಳುವಂತಿಲ್ಲ. ದೇವಸ್ಥಾನ ಮತ್ತು ಬೆಟ್ಟದ ಸ್ಥಿರ ಮತ್ತು ಚರಾಸ್ತಿಯನ್ನು ಬದಲಾಯಿಸಬಾರದು. ಸೆಕ್ಷನ್ 40ರ ಅನ್ವಯ ಸಂಪ್ರದಾಯ ಮತ್ತು ವಿಧಿ-ವಿಧಾನಗಳಿಗೆ ಬದಲಾವಣೆ ಮಾಡಬಾರದು. ದೇವಸ್ಥಾನದ ಖರ್ಚು-ವೆಚ್ಚದ ದಾಖಲೆ ಪರಿಶೀಲಿಸಲು ಪ್ರಾಧಿಕಾರದ ಕಾಯಂ ಸದಸ್ಯರಿಗೆ ಅನುಮತಿಸಬೇಕು ಎಂದು ಮನವಿ ಮಾಡಿದರು.