ಮೈಸೂರು: ಈಗಾಗಲೇ ಮುಡಾ ಸೈಟು ಹಗರಣ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಸಿದ್ದರಾಮಯ್ಯನವರನ್ನು ಕಾಡಲಾರಂಭಿಸಿದೆ. ಅ. 18ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದಾಗಿನಿಂದ ಪ್ರಕರಣದಲ್ಲಿ ಆರೋಪಿತರಾಗಿರುವ ಸಿಎಂ ಸಿದ್ದರಾಮಯ್ಯನವರ ಕುಟುಂಬದ ಸದಸ್ಯರಿಗೆ ಹೊಸ ಆತಂಕ ಶುರುವಾಗಿದೆ.
ಇದರ ಜೊತೆಗೆ ಪಾರ್ವತಿ ಸಿದ್ದರಾಮಯ್ಯನವರ ವಿರುದ್ಧ ಮತ್ತೊಂದು ಭೂ ಹಗರಣ ಕೇಳಿಬಂದಿದೆ, ಸಿಎಂ ಪತ್ನಿ ಪಾರ್ವತಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅನುಮೋದಿತ 20 ಗುಂಟೆ ಜಾಗವನ್ನು ಖರೀದಿ ಮಾಡಿದ್ದಾರೆ. ಅದರಲ್ಲಿ ರಸ್ತೆ ಮತ್ತು ಪೈಪ್ ಲೈನ್ ಗೆ ಸೇರಿದ್ದ ಜಾಗವನ್ನು ರಿಜಿಸ್ಟರ್ ಮಾಡಿಕೊಂಡಿದ್ದು, ಆ ವಿಚಾರ ತಿಳಿಯುತ್ತಿದ್ದಂತೆ ರಿಜಿಸ್ಟ್ರೇಷನ್ ತಿದ್ದುಪಡಿ ಮಾಡಿಸಿದ್ದಾರೆ ಎಂದು ಆರ್ ಟಿ ಐ ಕಾರ್ಯಕರ್ತ ಗಂಗರಾಜು ದಾಖಲೆ ಸಮೇತ ಆರೋಪ ಮಾಡಿದ್ದಾರೆ.
ಸಿಎಂ ಪತ್ನಿ ಪಾರ್ವತಿ ಮುಡಾ ಅನುಮೋದಿತ 20 ಗುಂಟೆ ಜಾಗವನ್ನು 29.06.2023 ರಲ್ಲಿ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಕೆಆರ್ ಎಸ್ ರಸ್ತೆಯಲ್ಲಿರುವ ಸರ್ವೆ ನಂಬರ್ 454 ರಲ್ಲಿ ಗಣೇಶ್ ದೀಕ್ಷಿತ್ ಎಂಬುವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗದಲ್ಲಿ, 20 ಗುಂಟೆ ಜಾಗವನ್ನ 1 ಕೋಟಿ 85 ಲಕ್ಷ ರೂಕೊಟ್ಟು ಖರೀದಿಸಿದ್ದಾರೆ. 20 ಗುಂಟೆ ಅಂದರೆ 21,771/99 ಚದರ ಅಡಿ ಜಾಗದ ಪೈಕಿ 8998 ಚದರ ಅಡಿ ಜಾಗ ರಸ್ತೆ ಮತ್ತು ಪೈಪ್ ಲೈನ್ ಜಾಗವಾಗಿದ್ದು, ಅದನ್ನು ಸೇರಿಸಿ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ಆರ್ ಟಿ ಐ ಕಾರ್ಯಕರ್ತರು ಅರ್ಜಿ ಹಾಕುತ್ತಿದ್ದಂತೆ 31.08.2024 ರಲ್ಲಿ ಮುಡಾಗೆ ಸೇರಿದ ರಸ್ತೆ ಮತ್ತು ಪೈಪ್ ಲೈನ್ ಜಾಗವನ್ನ ಬಿಟ್ಟು ರಿಜಿಸ್ಟ್ರೇಷನ್ ತಿದ್ದುಪಡಿ ಮಾಡಿಸಿದ್ದಾರೆ. ಪಾರ್ವತಿ ಅವರು 12,782 ಚದರ ಮೀಟರ್ ಜಾಗವನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡು, ಉಳಿದದ್ದನ್ನು ಪೈಪ್‌ಲೈನ್ ಮತ್ತು ರಸ್ತೆ ಯೋಜನೆಗಳಿಗೆ ಬಿಟ್ಟಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ.
ಗೃಹಿಣಿಯಾಗಿರುವ ಪಾರ್ವತಿ ಅವರಿಗೆ ಆದಾಯದ ಮೂಲವೇ ಇಲ್ಲ, ತಮ್ಮ ಪತಿ ಸಿದ್ದರಾಮಯ್ಯ ನೀಡಿದ ಹಣದಲ್ಲಿ ಜಮೀನು ಖರೀದಿಸಿದ್ದಾರೆ ಎಂದು ಆರೋಪಿಸಿರುವ ಮಾಡಿದ ಗಂಗರಾಜು, ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ಜಮೀನು ಖರೀದಿಸಿದ್ದಾರೆ ಎಂದು ಹೇಳಿದ್ದಾರೆ. ರಸ್ತೆ ವಿಸ್ತರಣೆ ಹಾಗೂ ಪೈಪ್‌ಲೈನ್ ಯೋಜನೆಗೆ ಮೀಸಲಿಟ್ಟ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ. ಸಿದ್ದರಾಮಯ್ಯ ಅವರು ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿರುವುದರಿಂದ ಮುಂದಿನ ವಾರ ರಾಜ್ಯಪಾಲರಿಗೆ ದೂರು ಸಲ್ಲಿಸಿ, ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವಂತೆ ಕೋರುತ್ತೇನೆ ಎಂದರು.
ಏತನ್ಮಧ್ಯೆ, ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮುಡಾ ಕಚೇರಿ ಮೇಲೆ ಶನಿವಾರ ಎರಡನೇ ದಿನವೂ ದಾಳಿ ಮುಂದುವರೆಸಿದ್ದಾರೆ. ಶುಕ್ರವಾರ ರಾತ್ರಿ 11.30ರವರೆಗೆ ಬಿಗಿ ಭದ್ರತೆಯಲ್ಲಿ ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಸೇರಿದಂತೆ ನಿವೇಶನ ಹಂಚಿಕೆಯಲ್ಲಿನ ಅವ್ಯವಹಾರಗಳಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ಸಿಆರ್‌ಪಿಎಫ್‌ನ ಸಿಬ್ಬಂದಿ ಶುಕ್ರವಾರ ರಾತ್ರಿ ಮುಡಾ ಕಚೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.