ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಆಗಮಿಸುತ್ತಿದ್ದ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಿರ್ಗಮಿಸುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ನಿನ್ನೆ ಭಾನುವಾರ ಬಂದಿತ್ತು. ಬಳಿಕ ತಪಾಸಣೆ ನಡೆಸಿದಾಗ ಅದು ಹುಸಿ ಕರೆ ಎಂಬುದು ಗೊತ್ತಾಯಿತು.
ಬಲ್ಲ ಮೂಲಗಳ ಪ್ರಕಾರ, ಅವುಗಳಲ್ಲಿ ಒಂದು ಅಲಯನ್ಸ್ ಏರ್ ವಿಮಾನವು (AI 528) ತೋರಣಗಲ್ಲಿನ ವಿದ್ಯಾನಗರದಿಂದ (ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ) ಹೊರಟಿದೆ.
ಬೆಂಗಳೂರು ವಿಮಾನನಿಲ್ದಾಣದಿಂದ ಮಧ್ಯಾಹ್ನ 1.15 ರ ಸುಮಾರಿಗೆ ಎಐ 528 ನಲ್ಲಿ ಬಾಂಬ್ ಇಡಲಾಗಿದೆ ಎಂಬ ಸುದ್ದಿ ನಮಗೆ ಬಂದಿತು. 46 ಪ್ರಯಾಣಿಕರಿದ್ದ ವಿಮಾನವು ಕೆಐಎಗೆ ಇಳಿಯುತ್ತಿತ್ತು. ಕೆಐಎಯ ಟರ್ಮಿನಲ್ 2 ರಲ್ಲಿ ಇಳಿದ ತಕ್ಷಣ, ಶ್ವಾನದಳ ಮತ್ತು ಬಾಂಬ್ ಸ್ಕ್ವಾಡ್ ಸಿಬ್ಬಂದಿ ತುರ್ತು ಸೇವಗೆ ಬಂದರು. ಎಲ್ಲಾ ಭದ್ರತಾ ಕ್ರಮಗಳನ್ನು ಅನುಸರಿಸಿ ತಪಾಸಣೆ ಮಾಡಿದಾಗ ಅದು ಹುಸಿ ಕರೆ ಎಂಬುದು ಗೊತ್ತಾಯಿತು. ವಿಮಾನವು ವಿದ್ಯಾನಗರಕ್ಕೆ ಹಿಂತಿರುಗಬೇಕಾಗಿತ್ತು, ಆದರೆ ತಡವಾಗಿ ಹೊರಟಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಈ ಮಧ್ಯೆ, ಆಕಾಶ ಏರ್ ಲೈನ್ಸ್ ನ ಕೆಐಎ ಡ್ಯೂಟಿ ಮ್ಯಾನೇಜರ್ ಹರಿಬಾಬು ಬಂಡಿ ಅವರು ನೀಡಿದ ದೂರಿನ ಮೇರೆಗೆ ಕೆಐಎ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ, ಬೆಂಗಳೂರು ಏರ್‌ಪೋರ್ಟ್ ಕಮಾಂಡ್ ಸೆಂಟರ್‌ಗೆ ಆರು ಇಂಡಿಗೋ ವಿಮಾನಗಳಲ್ಲಿ 12 ಬಾಂಬ್ ಗಳನ್ನು ಇಟ್ಟಿರುವ ಬಗ್ಗೆ ಬೆದರಿಕೆ ಕರೆ ಬಂದಿತ್ತು. ನಂತರ ತಪಾಸಣೆ ನಡೆಸಿದಾಗ ಅದು ಸಹ ಹುಸಿ ಕರೆ ಎಂಬುದು ಗೊತ್ತಾಯಿತು.
ಮಂಗಳೂರು ನಿಲ್ದಾಣಕ್ಕೆ ಬೆದರಿಕೆ ಕರೆ: ನಿನ್ನೆ ಭಾನುವಾರ ಮಂಗಳೂರಿನಿಂದ ದುಬೈಗೆ ಹೊರಟಿದ್ದ ವಿಮಾನಕ್ಕೂ (ಐಎಕ್ಸ್ 383) ಬಾಂಬ್ ಬೆದರಿಕೆ ಬಂದಿತ್ತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಮಧ್ಯಾಹ್ನ 12.55ಕ್ಕೆ ನಮಗೆ ಬೆದರಿಕೆ ಬಂದಿತ್ತು. ನಂತರ ಅದು ಹುಸಿ ಕರೆ ಎಂದು ತಿಳಿಯಿತು ಎಂದು ಹೇಳಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬೆದರಿಕೆ ಮೇಲ್: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭಾನುವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಆವರಣದಲ್ಲಿ ತೀವ್ರ ಭದ್ರತಾ ತಪಾಸಣೆ ನಡೆಸಲಾಗಿದೆ. ನಂತರ ಬೆದರಿಕೆ ಕರೆ ಸುಳ್ಳು ಎಂದು ತಿಳಿದುಬಂತು.