ಬೆಂಗಳೂರು: ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಗರ ಜಿಲ್ಲಾಡಳಿತ ನಾಳೆ (ಅ.23) ರಂದು ಶಾಲೆಗಳಿಗೆ ರಜೆ ಘೋಷಿಸಿದೆ.
ಜಿಲ್ಲಾಧಿಕಾರಿ ಜಗದೀಶ್ ಜಿ ಈ ಬಗ್ಗೆ ಆದೇಶ ಪ್ರಕಟಿಸಿದ್ದು, ವಿದ್ಯಾರ್ಥಿಗಳ ಹಿತಾಸಕ್ತಿ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶಾಲೆಗಳಿಗೆ ಮಾತ್ರವೇ ರಜೆ ಅನ್ವಯವಾಗಲಿದ್ದು, ಎಲ್ಲಾ ಕಾಲೇಜುಗಳು ಐಟಿಐಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.
2 ವಾರಗಳಲ್ಲಿ 3 ಬಾರಿ ಭಾರಿ ಮಳೆಯ ಎಚ್ಚರಿಕೆಯಿಂದಾಗಿ ಶಾಲೆಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ನಗರದಲ್ಲಿ ಮುಂದಿನ 24 ಗಂಟೆಗಳ ಕಾಲ ಐಎಂಡಿಯಿಂದ ಆರೆಂಜ್ ಅಲರ್ಟ್ ಘೋಷಣೆಯಾಗಿದೆ.
ಜಿಲ್ಲಾಧಿಕಾರಿ ಜಗದೀಶ ಮಾತನಾಡಿ, ಮಳೆ ಮತ್ತು ಪ್ರವಾಹ ಪರಿಸ್ಥಿತಿಯ ಬಗ್ಗೆ ಪ್ರತಿದಿನ ನಿಗಾ ವಹಿಸಲಾಗಿದ್ದು, ಅದರಂತೆ ನಿರ್ದೇಶನಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಅಕ್ಟೋಬರ್ 15 ರಿಂದ ಅಕ್ಟೋಬರ್ 16 ರವರೆಗೆ ಶಾಲೆಗಳನ್ನು ಮುಚ್ಚಲಾಗಿತ್ತು, ಈ ಅವಧಿಯು ವಾಲ್ಮೀಕಿ ಜಯಂತಿಯ ಸರ್ಕಾರಿ ರಜೆಯನ್ನು ಒಳಗೊಂಡಿತ್ತು.
ಅಕ್ಟೋಬರ್ 21 ರಂದು ಮುಂಜಾನೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಎರಡನೇ ಬಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ, ಆದೇಶ ತಡವಾಗಿ ಹೊರಬಿದ್ದ ಕಾರಣ ಹಲವು ಶಾಲೆಗಳು ಕಾರ್ಯಾಚರಣೆ ಮುಂದುವರಿಸಿದ್ದವು. ಇಷ್ಟು ಕಡಿಮೆ ಅವಧಿಯಲ್ಲಿ ಹಲವು ಬಾರಿ ಶಾಲೆಗಳಿಗೆ ರಜೆ ಘೋಷಿಸಿರುವ ಆದೇಶ ಹೊರಡಿಸಿರುವುದು ಇದೇ ಮೊದಲು ಎಂದು ಡಿಸಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಐಟಿ-ಬಿಟಿ ಕಾರಿಡಾರ್ ಸೇರಿದಂತೆ ನಗರದ ಹೊರವಲಯದಲ್ಲಿ ಪ್ರವಾಹದ ಪ್ರಕರಣಗಳು ಹೆಚ್ಚಿವೆ. ಅನೇಕ ತಾಂತ್ರಿಕ ವೃತ್ತಿಪರರು ತಮ್ಮ ಕೆಲಸದ ಸ್ಥಳಗಳಲ್ಲಿ ಅಥವಾ ಪ್ರಯಾಣಿಸುವಾಗ ಮಳೆ, ಪ್ರವಾಹದ ಸ್ಥಿತಿಗೆ ಸಿಲುಕಿದ್ದರು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಹಲವಾರು ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸಲಹೆ ನೀಡಿವೆ.
ಮನೆಯಿಂದ ಕೆಲಸ ಮಾಡುವ ಸಲಹೆ ನೀಡಿದ ಐಟಿ-ಬಿಟಿ ಸಚಿವರು
ಭಾರೀ ಮಳೆ ಮತ್ತು IMD ಯ ಆರೆಂಜ್ ಅಲರ್ಟ್ ಹಿನ್ನೆಲೆಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಕಂಪನಿಗಳಿಗೆ ಸಲಹೆ ನೀಡಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಅವರು, ಕಳೆದ ವಾರ ಇದೇ ರೀತಿಯ ಸಲಹೆಯನ್ನು ನೀಡಲಾಯಿತು ಎಂದು ಹೇಳಿದರು.