ಬೆಂಗಳೂರು: 2025-26 ಸಾಲಿನ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದು, ಈಗಾಗಲೇ ಹಲವು ಶಾಲೆಗಳು ಅರ್ಜಿಗೆ ಅಹ್ವಾನಿಸಿವೆ. ಈ ನಡುವೆ ಕೆಲ ಖಾಸಗಿ ಶಾಲೆಗಳು ಅಪ್ಲಿಕೇಶನ್ ಫಾರ್ಮ್ ಹೆಸರಿನಲ್ಲಿ ಸಾವಿರಾರು ರೂಪಾಯಿ ಪಡೆದು, ಸುಲಿಗೆ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಪೋಷಕರು ಆಗ್ರಹಿಸಿದ್ದಾರೆ.
ನನ್ನ ಮಗಳನ್ನು ಸರ್ಜಾಪುರದ ಖಾಸಗಿ ಶಾಲೆಗೆ ಸೇರಿಸಲು ಕಳೆದ ಎರಡು ವರ್ಷಗಳಿಂದ ಹಣವನ್ನು ಹೊಂದಿಸುತ್ತಿದ್ದೇನೆ. ಪ್ರವೇಶಾತಿ ಯಾವಾಗ ಪ್ರಾರಂಭವಾಗುತ್ತವೆ ಎಂದು ತಿಳಿಯಲು ಶಾಲೆಗಳನ್ನು ಸಹ ಸಂಪರ್ಕಿಸುತ್ತಿದ್ದೇನೆ. ಕೆಲವು ಶಾಲೆಗಳು ಈಗಾಗಲೇ ಪ್ರವೇಶ ಪತ್ರ (ಅಪ್ಲಿಕೇಷನ್ ಫಾರ್ಮ್)ಗಳನ್ನು ನೀಡುತ್ತಿವೆ. ನನ್ನ ಹೆಂಡತಿ ಮತ್ತು ನಾನು ಅಪ್ಲಿಕೇಶನ್ ಗಳನ್ನು ಖರೀದಿಸಲು ಪ್ರಾರಂಭಿಸಿದ್ದೇವೆ. ಪ್ರತಿ ಫಾರ್ಮ್ ಮತ್ತು ಪ್ರಾಸ್ಪೆಕ್ಟಸ್ 2,000 ರೂ. ಪಡೆಯುತ್ತಿದ್ದಾರೆಂದು ಸರ್ಜಾಪುರ ರಸ್ತೆಯ ನಿವಾಸಿ ಶೋಭಿತ್ ಬಿ ಎಂಬುವವರು ಹೇಳಿದ್ದಾರೆ.
ಕನಕಪುರ ರಸ್ತೆ ನಿವಾಸಿ ಸ್ವಾತಿ ಎಲ್ ಎಂಬುವವರು ಮಾತನಾಡಿ, ನಾನು ನನ್ನ ಮಗನನ್ನು ಅಪಾರ್ಟ್ಮೆಂಟ್ ಸಂಕೀರ್ಣದ ಎಲ್ಲಾ ಮಕ್ಕಳು ಓದುವ ಶಾಲೆಯಲ್ಲಿ ಸೇರಿಸಲು ಬಯಸುತ್ತಿದ್ದೇನೆ. ಅರ್ಜಿ ನಮೂನೆಯನ್ನು ಪಡೆಯಲು ನಾನು ಮೂರು ಗಂಟೆಗಳಿಗೂ ಹೆಚ್ಚು ಕಾಲ ಸರದಿ ಸಾಲಿನಲ್ಲಿ ನಿಂತಿದ್ದೆ. 3,000 ರೂ ನೀಡಿ ಅಪ್ಲಿಕೇಶನ್ ಪಡೆದಿದ್ದೇನೆ. ಇದೀಗ ಪ್ರವೇಶ ಶುಲ್ಕ ಹಾಗೂ ಡೊನೇಷನ್ ಹಣ ಹೊಂದಿಸಲು ಶ್ರಮಿಸುತ್ತಿದ್ದೇವೆಂದು ಹೇಳಿದ್ದಾರೆ.
ವೈಟ್‌ಫೀಲ್ಡ್‌ನ ನಿವಾಸಿ ಪುನೀತ್ ಎಂ ಎಂಬುವವರು ಮಾತನಾಡಿ, ಬೇರೆ ರಾಜ್ಯಗಳಲ್ಲಿ ಸಾಮಾನ್ಯವಾಗಿ ಜನವರಿ ಅಥವಾ ಫೆಬ್ರವರಿಯಲ್ಲಿ ಪ್ರವೇಶಾತಿಗಳು ಪ್ರಾರಂಭವಾಗುತ್ತವೆ. ಆದರೆ, ಬೆಂಗಳೂರಿನಲ್ಲಿರುವಷ್ಟು ಕೆಟ್ಟ ಪರಿಸ್ಥಿತಿ ಅಲ್ಲಿಲ್ಲ. ಇಲ್ಲಿ, ಪ್ರವೇಶ ಪ್ರಕ್ರಿಯೆಯು ಅಕ್ಟೋಬರ್‌ನಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಶಾಲೆಗಳಲ್ಲಿ ಡಿಸೆಂಬರ್‌ನಲ್ಲಿ ಪ್ರವೇಶ ಪ್ರಕ್ರಿಯೆ ಕೊನೆಯಾಗಿರುತ್ತದೆ, ಹೀಗಾಗಿ ಶಾಲೆಯ ಕಾರ್ಯಕ್ಷಮತೆಯನ್ನು ನೋಡುವ ಆಯ್ಕೆ ಪೋಷಕರಿಗೆ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆಂಗ್ಲೋ-ಇಂಡಿಯನ್ ಸ್ಕೂಲ್ಸ್ ಅಸೋಸಿಯೇಷನ್‌ನ ಸದಸ್ಯ ಜೆರ್ರಿ ಜಾರ್ಜ್ ಮ್ಯಾಥ್ಯೂ ಅವರು ಮಾತನಾಡಿ, ಯಾವುದೇ ಶಾಲೆಗಳು ಹೆಚ್ಚಿನ ಚಂದಾದಾರಿಕೆ ಹೊಂದಿರುವ ಅರ್ಜಿ ನಮೂನೆಗಳ ಮಾರಾಟದಿಂದ ಹಣವನ್ನು ಗಳಿಸುತ್ತಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದ ಆಂಗ್ಲ ಮಾಧ್ಯಮ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್ ಅವರು ಮಾತನಾಡಿ, ಶಾಲಾ ಪ್ರವೇಶ ಮತ್ತು ಶುಲ್ಕವನ್ನು ನಿಯಂತ್ರಿಸಲು ಸರ್ಕಾರಕ್ಕೆ ತಿದ್ದುಪಡಿ ತರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಮಾತನಾಡಿ, ಸರ್ಕಾರಿ ಶಾಲೆಗಳು ಅಪ್ಲಿಕೇಷನ್ ಗಳನ್ನು ನೀಡುವುದಿಲ್ಲ, ಖಾಸಗಿ ಸಂಸ್ಥೆಗಳು ಮಾತ್ರ ನೀಡುತ್ತಿವೆ. ಖಾಸಗಿ ಶಾಲೆಗಳು ಸಂಘವನ್ನು ಹೊಂದಿದ್ದು, ಅವರು ಸ್ವಯಂ-ನಿಯಂತ್ರಿಸಬೇಕು. ಆದಾಗ್ಯೂ, ಅನೇಕ ಧ್ವನಿಗಳು ಎತ್ತಿರುವ ಕಾರಣ ಈ ಸಮಸ್ಯೆಯನ್ನು ಶೀಘ್ರದಲ್ಲೇ ಸರ್ಕಾರವು ಪರಿಶೀಲಿಸುತ್ತದೆ ಎಂದು ಹೇಳಿದ್ದಾರೆ.