ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(BMTC) 'ಸಿಟಿ ವಿಥ್ ಬೆಸ್ಟ್ ರೆಕಾರ್ಡ್ ಆಫ್ ಪಬ್ಲಿಕ್ ಇನ್ವಾಲ್ವ್ಮೆಂಟ್ ಇನ್ ಟ್ರಾನ್ಸ್ಪೋರ್ಟ್' ವಿಭಾಗದಲ್ಲಿ ರಾಷ್ಟ್ರ ಮಟ್ಟದ ಪ್ರತಿಷ್ಠಿತ 'ಅವಾರ್ಡ್ ಆಫ್ ಎಕ್ಸೆಲೆನ್ಸ್ ಇನ್ ಅರ್ಬನ್ ಟ್ರಾನ್ಸ್ಪೋರ್ಟ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಗುಜರಾತ್‌ನ ಗಾಂಧಿನಗರದ ಮಹಾತ್ಮ ಗಾಂಧಿ ಮಂದಿರ ಕನ್ವೆನ್ಷನ್ ಸೆಂಟರ್‌ನಲ್ಲಿ ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದೆ ಎಂದು ಅಧಿಕಾರಿಗಳ ತಿಳಿಸಿದ್ದಾರೆ.
ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್ ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಂದ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕೇಂದ್ರ ಸರ್ಕಾರದ ಈ ಪ್ರಶಸ್ತಿಯು ನಾಗರಿಕರ ಸುರಕ್ಷತೆ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುವುದಕ್ಕೆ ಮೀಸಲಿದ್ದು, ಅಕ್ಟೋಬರ್ ತಿಂಗಳಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ದೇಶದ ಇತರೆ ನಗರ ಸಾರಿಗೆ ಸಂಸ್ಥೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್ಗಳೊಂದಿಗೆ ಸ್ಪರ್ಧಿಸಿ ಈ ಪುರಸ್ಕಾರವನ್ನು ಪಡೆದಿದೆ.
ಬಿಎಂಟಿಸಿ ಇತ್ತೀಚಿಗೆ ಎಚ್‌ಎಸ್‌ಆರ್ ಲೇಔಟ್ ನಲ್ಲಿ ಇಂಟ್ರಾ ಲೂಪ್ ಬಸ್ ಎಂಬ ವಿನೂತನ ಮಾದರಿಯ ಸೇವೆಯಿಂದ ಸಾರ್ವಜನಿಕ ಮನ್ನಣೆ ಪಡೆದಿದೆ. ರಾಷ್ಟ್ರದಾದ್ಯಂತ ಈ ಮಾದರಿಯ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಹೇಳಿದ್ದಾರೆ.