ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ 10 ಸರ್ವೇ ನಂಬರುಗಳ 11 ಎಕರೆ ಆಸ್ತಿ ಮಾತ್ರ ವಕ್ಫ್ ಆಸ್ತಿ ಎಂದು ಗೆಜೆಟ್ ನೋಟಿಫಿಕೇಷನ್ ಆಗಿರುವುದು ವಿವಾದಕ್ಕೀಡಾಗಿದ್ದು, ಈ ಬಗ್ಗೆ ಸಚಿವ ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರು ಶನಿವಾರ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಬಹಳಷ್ಟು ಚರ್ಚೆ ಆಗುತ್ತಿದೆ. ವಕ್ಫ್ ಬೋರ್ಡ್ ನೋಟಿಸ್ ಕೊಟ್ಟಿದ್ದಾರೆ. ತಹಶೀಲ್ದಾರ್ ಜೊತೆ ರೈತರ ಜೊತೆಗೆ ಚರ್ಚೆ ಮಾಡಿ, ರೈತರ ಒಂದಿಂಚು ಜಮೀನು ತಪ್ಪಾಗಿ ವಕ್ಫ್‌ಗೆ ಹೋಗುವುದಿಲ್ಲ ಎಂದು ಟ್ವೀಟ್ ಮಾಡಿದ್ದೆ. ಇದಾದ ಮೇಲೆ ತೇಜಸ್ವಿ ಸೂರ್ಯ ಕೂಡ ಹೋಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಇದು ದೊಡ್ಡ ಸುದ್ದಿ ಆಗಿದೆ.
ವಕ್ಫ್ ಆಸ್ತಿಗಳು 1974, 1978 ಗೆಜೆಟ್ ನೋಟಿಫಿಕೇಷನ್ ಆಗಿದೆ. 2016ರಲ್ಲೂ ಗೆಜೆಟ್ ನೋಟಿಫಿಕೇಷನ್ ಆಗಿದೆ. ಇದು ಮೂರನೇ ಬಾರಿಗೆ ನೋಟಿಫಿಕೇಷನ್ ಆಗಿದೆ. ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದು ಆಗಿದೆ. ಇದು ಯಾವುದು ವಕ್ಫ್ ಜಮೀನಲ್ಲ. ವಕ್ಫ್ ಆಸ್ತಿ ಬರೀ 11 ಎಕರೆ, ಮಿಕ್ಕಿದ್ದು ಹೊನವಾಡ ಗ್ರಾಮದ ರೈತರದು. ಅನಗತ್ಯ ಗೊಂದಲ, ಆತಂಕ ಬೇಡ ಎಂದು ಹೇಳಿದರು.
1974ರ ಗೆಜೆಟ್ ನಲ್ಲಿನ ತಪ್ಪನ್ನು 1977ರಲ್ಲಿ ಸರಿ ಮಾಡಿದ ವಕ್ಫ್ ಮಂಡಳಿ ಗೆಜೆಟ್‌ನಲ್ಲಿ ತಪ್ಪಾಗಿ ನಮೂದಿಸಿದ್ದರಿಂದಾಗಿ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ 1,200 ಎಕರೆ ವಕ್ಫ್ ಆಸ್ತಿ ಎನ್ನುವ ಗೊಂದಲ ಸೃಷ್ಟಿಯಾಗಿದೆಯಷ್ಟೆ. ಇಲ್ಲಿ 11 ಎಕರೆ ಮಾತ್ರ ವಕ್ಫ್ ಗೆ ಸೇರಿದ್ದು, ಇದರಲ್ಲಿ 10 ಎಕರೆ 14 ಗುಂಟೆಯಲ್ಲಿ ಖಬರಸ್ತಾನವಿದೆ. ಉಳಿದ 24 ಗುಂಟೆಯಲ್ಲಿ ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ. ಉಳಿದ ಜಮೀನೆಲ್ಲ ರೈತರಿಗೆ ಸೇರಿದೆ. ಇದನ್ನು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ 1974, 1978 ಮತ್ತು 2016ರಲ್ಲಿ ವಕ್ಫ್ ಆಸ್ತಿಗಳ ಅಧಿಸೂಚನೆ ಹೊರಬಿದ್ದಿದೆ. ವಕ್ಫ್ ಆಸ್ತಿ ಇರುವುದು ವಿಜಯಪುರ ನಗರದ ವ್ಯಾಪ್ತಿಯಲ್ಲಿರುವ ಮಹಾಲಬಾಗಾಯತದಲ್ಲಿ. ಆದರೆ 1974ರ ಗೆಜೆಟ್ ನಲ್ಲಿ ಮಹಾಲಬಾಗಾಯತದ ಪಕ್ಕ ಬ್ರ್ಯಾಕೆಟ್ ನಲ್ಲಿ ಹೊನವಾಡ ಎಂದು ಬರೆದು ಬಿಟ್ಟಿದ್ದಾರೆ. ಈ ವಿಷಯವನ್ನು ರೈತರು ನಮ್ಮ ಗಮನಕ್ಕೆ ತಂದ ಕೂಡಲೇ ಅ.19ರಂದು ಜಿಲ್ಲಾಧಿಕಾರಿ, ತಹಸೀಲ್ದಾರ್ ಎಲ್ಲರನ್ನೂ ಕರೆದು, ಸಭೆ ನಡೆಸಿ, ಸೂಕ್ತ ನಿರ್ದೇಶನ ಕೊಟ್ಟಿದ್ದೇನೆ. ಈ ವಿಚಾರದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಅವರಾಗಲಿ, ಯತ್ನಾಳ್ ಅವರಾಗಲಿ ರಾಜಕೀಯ ಮಾಡಬೇಕಾಗಿಲ್ಲ. ರೈತರ ಒಂದಿಂಚು ಕೂಡ ವಕ್ಫ್ ಆಸ್ತಿ ಆಗಲು ಬಿಡಲ್ಲ.
ಹೊನವಾಡ ಗ್ರಾಮವು ನಾನು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲೇ ಇದೆ. ಇಲ್ಲಿನ ಹತ್ತು ಸರ್ವೇ ನಂಬರುಗಳಲ್ಲಿರುವ 11 ಎಕರೆ ಮಾತ್ರ ವಕ್ಫ್ ಆಸ್ತಿಯಷ್ಟೆ. 1974ರ ಗೆಜೆಟ್ ನಲ್ಲಿನ ತಪ್ಪು ಗಳನ್ನು ವಕ್ಫ್ ಮಂಡಳಿಯೇ 1977ರಲ್ಲಿ ತಿದ್ದುಪಡಿ ಮಾಡಿ, ಬ್ರಾಕೆಟ್ ನಲ್ಲಿದ್ದ ಹೊನವಾಡ ಹೆಸರನ್ನು ತೆಗೆಯಲಾಗಿದೆ. ಯಾವುದು ನಿಯಮಾನುಸಾರ ವಕ್ಫ್ ಆಸ್ತಿಯೋ ಅದಷ್ಟೇ ಅವರಿಗೆ ಸೇರುತ್ತದೆ. ರೈತರಾಗಲಿ, ಖಾಸಗಿ ಮಾಲೀಕರಾಗಲಿ ಈ ಬಗ್ಗೆ ಗೊಂದಲಕ್ಕೆ ಒಳಗಾಗಬೇಕಾಗಿಲ್ಲ. ಈ ಸಂಬಂಧ ನಾನು ಅಧಿಕಾರಿಗಳೊಂದಿಗೆ ಸದ್ಯದಲ್ಲೇ ಮತ್ತೊಂದು ಸಭೆ ನಡೆಸಿ ಗೊಂದಲ ಬಗೆಹರಿಸುತ್ತೇನೆಂದು ತಿಳಿಸಿದ್ದಾರೆ.
ವಕ್ಫ್ ಬೋರ್ಡ್‌ನಿಂದ ರೈತರಿಗೆ ನೋಟಿಸ್ ನೀಡಿರುವ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಈ ಹಿಂದೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ, ಶನಿವಾರ ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರು ಕೂಡ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಸರ್ಕಾರ ಸ್ಪಷ್ಟನೆ ನೀಡಿದೆ.
ಸಚಿವರ ಸ್ಪಷ್ಟನೆ ಕುರಿತು ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ ಅವರು, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂಬಿ ಪಾಟೀಲ್ ಅವರ ಪತ್ರಿಕಾಗೋಷ್ಠಿಯನ್ನು ಈಗಷ್ಟೇ ಗಮನಿಸಿದೆ. ಅವರ ಪ್ರಕಾರ, ವಕ್ಫ್ ಬೋರ್ಡ್ ನಿಂದ ಒಂದೇ ಒಂದು ಇಂಚು ಭೂಮಿ ಕೂಡ ಹಕ್ಕು ಸಾಧಿಸಲಾಗಿಲ್ಲ ಎನ್ನುವುದು ಶುದ್ಧ ಸುಳ್ಳು ಎನ್ನುವುದು ಈ ದಾಖಲೆ ಗಮನಿಸಿದರೆ ತಿಳಿಯುತ್ತದೆ.ನಿನ್ನೆ ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮದ ರೈತರು ನನಗೆ ಸಲ್ಲಿಸಿರುವ ಆರ್ ಟಿ ಸಿ & ಮ್ಯೂಟೇಶನ್ ರಿಜಿಸ್ಟರ್ ದಾಖಲೆಯ ಪ್ರಕಾರ, 9 ಎಕರೆ ಭೂಮಿ ವಕ್ಫ್ ಗೆ ನೋಂದಣಿ ಆಗಿರುವುದು ದೃಢಪಟ್ಟಿದೆ. ಈ ದಾಖಲೆಯು 19.10.2024 ರ ದಿನಾಂಕದ ಅನ್ವಯವಾಗಿದ್ದು, ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಬದಲಾವಣೆ ಮಾಡಲಾಗಿದೆ ಎಂಬುದನ್ನು ಇದರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.ಇದೆಲ್ಲವನ್ನೂ ಗಮನಿಸಿದರೆ, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರದೇ, ಕಂದಾಯ ಅಧಿಕಾರಿಗಳು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಅಣತಿಯಂತೆ ದಾಖಲೀಕರಣ ಮಾಡುತ್ತಿರುವುದು ಕಂಡುಬರುತ್ತಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ಯತ್ನಾಳ್ ಅವರು, ರೈತರ ಪಹಣಿಯಲ್ಲಿ (Record of Rights) ನಲ್ಲಿ ವಕ್ಫ್ ಹೆಸರು ದಾಖಲು ಮಾಡುವುದರಿಂದ ಏನೂ ಆಗುವುದಿಲ್ಲ ಎಂದು ಜಿಲ್ಲಾಡಳಿತ ಮತ್ತು ಕೆಲ ಸಚಿವರು ಪತ್ರಿಕಾ ಹೇಳಿಕೆಯನ್ನು ನೀಡಿದ್ದನ್ನು ನೋಡಿದ್ದೇನೆ. ರೈತರ ಹೆಸರನ್ನು ತೆಗೆದು ವಕ್ಫ್ ಹೆಸರು ನಮೂದಿಸಿರುವುದರಿಂದ ರೈತರಿಗೆ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ. ಬೆಳೆ ವಿಮೆ [Crop Insurance] ಪಡೆಯಲು ಹಾಗೂ ಬೇರೆ ಯಾವುದಾದರೂ ಪರಿಹಾರಗಳನ್ನು ಪಡೆಯಲು ಸಹ ಈ ಪಹಣಿ ಎಂಟ್ರಿ ಗೊಂದಲ ಮೂಡಿಸಿ ರೈತರಿಗೆ ತೀವ್ರ ತೊಂದರೆಯಾಗುತ್ತದೆ. ಕಚೇರಿಯಿಂದ ಕಚೇರಿಗೆ ಅಲೆದು ಕೊನೆಗೆ ವಕ್ಫ್ ಗೆ ಅಪೀಲು ಹೋಗಬೇಕು ಎಂದು ಹೇಳಿ ಕಳುಹಿಸುತ್ತಾರೆ.
ವಕ್ಫ್ ನಲ್ಲಿ ಮೇಲ್ಮನವಿ ಹೋದರೆ ಏನಾಗುತ್ತೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಇವರ ಗೇಂ ಪ್ಲಾನ್ ತುಂಬಾ ಸ್ಪಷ್ಟವಾಗಿದೆ. ಗೊಂದಲ ಮೂಡಿಸಿ, ಒತ್ತಡ ಹೇರಿ ಕಡೆಗೆ ಭೂಮಿ ಕಿತ್ತುಕೊಳ್ಳುವುದು. ಇವೆಲ್ಲ ಆಗುವುದಕ್ಕೆ ನಾವು ಬಿಡುವುದಿಲ್ಲ. ನಾವಿರೋದು ಮೊಘಲ್ ಆಳ್ವಿಕೆಯಲ್ಲಲ್ಲ, ನಮ್ಮನ್ನು ಕಾಪಾಡಲು ನೆಲದ ಕಾನೂನು ಹಾಗೂ ಸಂವಿಧಾನವಿದೆ. ರೈತರ ಪರ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ್ದರು.
ವಿಜಯೇಂದ್ರ ಅವರು ಮಾತನಾಡಿ, ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೆ ನಿಂತಿದೆ ಧರ್ಮ" ಎಂಬ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ಭ್ರಷ್ಟಾಚಾರದಲ್ಲಿ ತೊಡಗಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರ ಅಕ್ಷರಶಃ ಮರೆತಿರುವುದು ವಿಜಯಪುರ ಜಿಲ್ಲೆಯ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಷಡ್ಯಂತ್ರದ ಮೂಲಕ ಬಯಲಾಗುತ್ತಿದೆ ಎಂದು ಕಿಡಿಕಾರಿದ್ದರು.
ತಲತಲಾಂತರ ಕಾಲದಿಂದಲೂ ಕೃಷಿ, ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವ ವಿಜಯಪುರದ ನೂರಾರು ರೈತ ಕುಟುಂಬಗಳಿಗೆ ತರಾತುರಿಯಲ್ಲಿ ನೋಟಿಸ್ ನೀಡಿ ಕೆಲವೊಂದು ದಾಖಲೆಗಳಲ್ಲಿ, ವಕ್ಫ್ ಬೋರ್ಡ್ ಕರ್ನಾಟಕ ಸರ್ಕಾರದ ಅನ್ವಯ ಎಂದು ನಮೂದಿಸಿ ಅಧಿಕಾರಿಗಳ ಮೂಲಕ ನೋಟಿಸ್ ನೀಡಿರುವ ಸರ್ಕಾರದ ಕ್ರಮ ರೈತ ವಿರೋಧಿ ನಿಲುವಿಗೆ ಸ್ಪಷ್ಟ ನಿದರ್ಶನವಾಗಿದೆ. ವಕ್ಫ್ ಕಾಯ್ದೆ ಹೆಸರಿನಲ್ಲಿ ಕಾನೂನು ಪ್ರಕಾರವೇ ಲೂಟಿಗೆ ಇಳಿಯುವ ಶಾಸನಬದ್ಧ ಅಧಿಕಾರವನ್ನು ಕಾಂಗ್ರೆಸ್ ಒದಗಿಸಿದ್ದೇ ಈ ರೀತಿಯ ಗೊಂದಲಗಳಿಗೆ ಮೂಲ ಕಾರಣವಾಗಿದ್ದು, ಈ ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವ ನಿಟ್ಟಿನಲ್ಲಿ ನಮ್ಮ ನರೇಂದ್ರ ಮೋದಿ ಜೀ ಅವರ ನೇತೃತ್ವದ ಸರ್ಕಾರ ಶೀಘ್ರವೇ ತಿದ್ದುಪಡಿ ಮಸೂದೆ ಜಾರಿಗೆ ತರಲು ಹೊರಟಿದೆ.
ವಕ್ಫ್ ಕಾಯ್ದೆ ಮೂಲಕ ಬಹುಸಂಖ್ಯಾತ ಹಿಂದೂಗಳಿಗೆ ಕಾಂಗ್ರೆಸ್ ಸರ್ಕಾರ ಎಸಗುತ್ತಿರುವ ಮೋಸ, ಅನ್ಯಾಯಗಳು ಗುಟ್ಟಾಗಿ ಉಳಿದಿಲ್ಲ, ಆತುರದ ಹಿಂದೂ ವಿರೋಧಿ ಹಾಗೂ ರೈತ ವಿರೋಧಿ ಕ್ರಮಗಳನ್ನು ಈ ಕೂಡಲೇ ನಿಲ್ಲಿಸದಿದ್ದರೆ ಬಿಜೆಪಿ ನ್ಯಾಯಕ್ಕಾಗಿ ಹೋರಾಟಕ್ಕಿಳಿಯಲಿದೆ. ನಮ್ಮ ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸಲು ಶ್ರಮಿಸುತ್ತಿದೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಓಲೈಕೆಯ ರಾಜಕಾರಣಕ್ಕಾಗಿ ರೈತರ ಭೂಮಿಯನ್ನೇ ಕಸಿದುಕೊಳ್ಳಲು ಸಂಚು ಹಾಕುತ್ತಿರುವುದು ದುರಂತದ ದೌರ್ಭಾಗ್ಯವೇ ಸರಿ ಎಂದು ತಿಳಿಸಿದ್ದರು.