ಉಡುಪಿ: ಪ್ರಯಾಣಿಕರು ಇರುವಾಗಲೇ ಮಾರ್ಗ ಮಧ್ಯೆ ಕೆಎಸ್ ಆರ್ ಟಿಸಿ ಬಸ್ ನ ಫುಟ್ ಬೋರ್ಡ್ ಕಳಚಿದ್ದು, ಅದರ ನಡುವೆಯೇ ಪ್ರಯಾಣಿಕರು ಪ್ರಯಾಣಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉಡುಪಿ-ಕಾರ್ಕಳ ಮಾರ್ಗದ ಬಸ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಇದರ ನಡುವೆಯೇ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜ್ಯ ಸರ್ಕಾರದ ಫ್ರೀ ಬಸ್ ಯೋಜನೆಯಿಂದಾಗಿ ಬಸ್ ಗಳಿಗೆ ಈ ಸ್ಥಿತಿ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇಲಾಖೆ ಸ್ಪಷ್ಟನೆ
ಇನ್ನು ಈ ವೈರಲ್ ವಿಡಿಯೋ ಕುರಿತಂತೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಮಾಧ್ಯಮಗಳಿಗೆ ಸ್ಪಷ್ಟನೆಗೆ ನೀಡಿದ್ದು, ಶುಕ್ರವಾರ ಈ ಘಟನೆ ಸಂಭವಿಸಿದ್ದು, 60 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ದೊಡ್ಡ ಹಂಪ್‌ಗೆ ಡಿಕ್ಕಿ ಹೊಡೆದ ಕಾರಣ ಬಸ್ ನ ಪುಟ್ ಬೋರ್ಡ್ ಗೆ ಹಾನಿಯಾಗಿತ್ತು. ವಿಚಾರ ತಿಳಿದ ಕೂಡಲೇ ಬಸ್ ಅನ್ನು ತಕ್ಷಣವೇ ಸರ್ವಿಸ್ ನಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದ್ದು, ವರ್ಕ್ ಶಾಪ್ ಗೆ ಕಳುಹಿಸಿ ರಿಪೇರಿ ಕೆಲಸ ಮಾಡಿಸಲಾಗುತ್ತಿದೆ. ಅಲ್ಲದೆ ಆಗಲೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಬೇರೆ ಬಸ್ ಗೆ ವರ್ಗಾಯಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.