ಬೆಂಗಳೂರು: ಮಾಜಿ ಸಚಿವ ಹಾಗೂ ರಾಜಾಜಿನಗರ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡು ಬಂದಿದ್ದು, ನಗರ ಖಾಸಗಿ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಬುಧವಾರ ತಿಳಿದುಬಂದಿದೆ.
ಕಳೆದ ನಾಲ್ಕು ದಿನಗಳಿಂದ ಸುರೇಶ್ ಕುಮಾರ್ ಅವರು ಚಿಕನ್ ಗುನ್ಯಾ ಮತ್ತು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.
ಸುರೇಶ್ ಕುಮಾರ್ ಅವರು, ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ಪಕ್ಷದೊಂದಿಗೆ ಮೈಸೂರು ಪಾದಯಾತ್ರೆ ನಂತರ ಸುರೇಶ್ ತಿರುಪತಿ ಪ್ರವಾಸ ಕೈಗೊಂಡಿದ್ದರು. ಕಳೆದೊಂದು ವಾರದಿಂದ ರೂಪಾಂತರಿ ಚಿಕನ್ ಗುನ್ಯಾ ಎಂದು ಕಾಣಿಸಿಕೊಂಡಿದೆ ಎಂದು ಮಾಹಿತಿ ಲಭ್ಯವಾಗಿದೆ. ಅಲ್ಲದೆ ಬ್ರೈನ್ ಮತ್ತು ಸ್ಪೈನಲ್ ಕಾರ್ಡ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.
ಇದರ ಬೆನ್ನಲ್ಲೇ ಅತೀವ್ರ ನಿಶ್ಯಕ್ತಿಯಿಂದ ಸುರೇಶ್ ಕುಮಾರ್ ಅವರು ಬಳಲುತ್ತಿದ್ದರು ಎನ್ನಲಾಗಿದೆ. ಪ್ರಸ್ತುತ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲವೆಂದು ಹೇಳಲಾಗುತ್ತಿದೆ.