ಚಾರ್ಜ್ ಶೀಟ್ ಸಲ್ಲಿಕೆ ಬಗ್ಗೆ ನಗರ ಪೊಲೀಸ್ ಆಯುಕ್ತರ ಹೇಳಿಕೆ  
ರಾಜ್ಯ

ನಟ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ: ನಗರ ಪೊಲೀಸ್ ಆಯುಕ್ತರು ಏನೆಂದರು?

ಪ್ರಕರಣದ ಆರೋಪಿಗಳಾದ ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡ ಮತ್ತು ಇತರ 15 ಮಂದಿ ಪ್ರಸ್ತುತ ರಾಜ್ಯದ ವಿವಿಧ ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ 17 ಆರೋಪಿಗಳ ವಿರುದ್ಧ ಬೆಂಗಳೂರು ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಭದ್ರವಾದ ಬಾಕ್ಸ್ ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಎಲ್ಲಾ ಆಯಾಮಗಳಿಂದಲೂ ಪ್ರಕರಣದ ಆಳವಾದ ತನಿಖೆ ನಡೆಸಿ ಬಲವಾದ ಆರೋಪಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಸುದ್ದಿಗಾರರಿಗೆ ಇಂದು ತಿಳಿಸಿದ್ದಾರೆ.

ಚಾರ್ಜ್‌ಶೀಟ್ 231 ಸಾಕ್ಷಿ ಹೇಳಿಕೆಗಳು, ತಾಂತ್ರಿಕ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಒಳಗೊಂಡಿದೆ, ಇದೊಂದು ಬೃಹತ್ ಮಟ್ಟದ ತನಿಖೆಯಾಗಿದೆ. 3, 991 ಪುಟಗಳ ಆರೋಪಪಟ್ಟಿಯನ್ನು (ಏಳು ಸಂಪುಟಗಳು ಮತ್ತು 10 ಕಡತಗಳೊಂದಿಗೆ) 24 ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಆಯುಕ್ತರು ಸುದ್ದಿಗಾರರಿಗೆ ವಿವರಿಸಿದರು.

ಈ ಪ್ರಕರಣದಲ್ಲಿ 17 ಮಂದಿಯನ್ನು ಬಂಧಿಸಿ ಅವರೀಗ ನ್ಯಾಯಾಂಗ ಬಂಧನದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದಾರೆ. ಮೂವರು ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ; 27 ಸಾಕ್ಷಿಗಳು ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಇತರ ಸಾಕ್ಷಿಗಳು ಪೊಲೀಸರ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ ಎಂದರು.

ಸಿಎಫ್‌ಎಸ್‌ಎಲ್‌ ವರದಿ ಬಂದಿಲ್ಲ: ನಾವು ತನಿಖೆಗೆ ಸಂಬಂಧಿಸಿದ ಹಲವಾರು ವಸ್ತುಗಳನ್ನು ಇಲ್ಲಿಯ ಎಫ್‌ಎಸ್‌ಎಲ್ (ಫೊರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ) ಮತ್ತು ಸಿಎಫ್‌ಎಸ್‌ಎಲ್ (ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯ, ಹೈದರಾಬಾದ್) ಗೆ ಕಳುಹಿಸಿದ್ದೇವೆ. ಫಾರೆನ್ಸಿಕ್ ವರದಿ ಬಂದಿದೆ. ಸಿಎಫ್‌ಎಸ್‌ಎಲ್‌ನಿಂದ ಕೆಲವು ವರದಿಗಳು ಇನ್ನೂ ಬರಬೇಕಿದೆ ಎಂದರು.

ಪ್ರಕರಣದ ಸಾಕ್ಷಿಗಳಲ್ಲಿ 56 ಮಂದಿ ಪೊಲೀಸ್ ಅಧಿಕಾರಿಗಳು ಇದ್ದಾರೆ ಎಂದು ದಯಾನಂದ ಹೇಳಿದರು. ತನಿಖಾಧಿಕಾರಿಗಳು ಸಂಗ್ರಹಿಸಿದ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು, ಸಾಂದರ್ಭಿಕ, ತಾಂತ್ರಿಕ, ವೈಜ್ಞಾನಿಕ ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ 17 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಗ್ರಹಿಸಿದ ಸಾಕ್ಷ್ಯವನ್ನು ಸೆಕ್ಷನ್ 173 (ಸಿಆರ್‌ಪಿಸಿ (ಅಪರಾಧ ಪ್ರಕ್ರಿಯಾ ಸಂಹಿತೆ)ರ ಅಡಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ, ಹೆಚ್ಚಿನ ತನಿಖೆಗಾಗಿ ತನಿಖಾ ಸಂಸ್ಥೆಗೆ ಅನಿಯಂತ್ರಿತ ಹಕ್ಕನ್ನು ನೀಡುತ್ತದೆ.

ಪ್ರಕರಣದ ಆರೋಪಿಗಳಾದ ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡ ಮತ್ತು ಇತರ 15 ಮಂದಿ ಪ್ರಸ್ತುತ ರಾಜ್ಯದ ವಿವಿಧ ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ನಟನ ಅಭಿಮಾನಿಯಾದ 33 ವರ್ಷದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದು, ಇದು ದರ್ಶನ್ ಅವರನ್ನು ವಿಪರೀತ ಸಿಟ್ಟಿಗೆ ಎಡೆಮಾಡಿಕೊಟ್ಟು ಕೊಲೆಗೆ ಕಾರಣವಾಯಿತು ಎನ್ನಲಾಗಿದೆ.

ಕಳೆದ ಜೂನ್ 9 ರಂದು ಬೆಂಗಳೂರಿನ ಸುಮನಹಳ್ಳಿಯ ಅಪಾರ್ಟ್‌ಮೆಂಟ್ ಪಕ್ಕದ ಚರಂಡಿಯ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು.

ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಭಾಗವಾಗಿರುವ ಆರೋಪಿಗಳಲ್ಲಿ ಒಬ್ಬನಾದ ರಾಘವೇಂದ್ರ, ನಟ ದರ್ಶನ್ ನನ್ನು ಭೇಟಿ ಮಾಡಿಸುವುದಾಗಿ ಆಸೆ ತೋರಿಸಿ ಇಲ್ಲಿನ ಆರ್ ಆರ್ ನಗರದ ಶೆಡ್‌ಗೆ ಕರೆತಂದಿದ್ದ. ಶೆಡ್‌ನಲ್ಲಿಯೇ ಆತನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ರೇಣುಕಾಸ್ವಾಮಿ ಆಘಾತ ಮತ್ತು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ನಂಬರ್ ಒನ್ ಆರೋಪಿಯಾಗಿರುವ ಪವಿತ್ರಾ ಗೌಡ, ರೇಣುಕಾಸ್ವಾಮಿ ಹತ್ಯೆಗೆ ಪ್ರಮುಖ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಇತರ ಆರೋಪಿಗಳಿಗೆ ಪ್ರಚೋದನೆ ನೀಡಿ, ಅವರೊಂದಿಗೆ ಸಂಚು ರೂಪಿಸಿ ಅಪರಾಧದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT