ಉಡುಪಿ: ಶಿಕ್ಷಕನಿಗೆ ಘೋಷಿಸಿದ್ದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಸರ್ಕಾರ ತಡೆ
ಉಡುಪಿ ಜಿಲ್ಲೆಯ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ ಜಿ ರಾಮಕೃಷ್ಣ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡುವುದನ್ನು ರಾಜ್ಯ ಸರ್ಕಾರ ತಡೆ ಹಿಡಿದಿದೆ. ಶಿಕ್ಷಕರ ದಿನಾಚರಣೆ ನಿಮಿತ್ತ ರಾಮಕೃಷ್ಣ ಅವರಿಗೆ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ ಮುಸ್ಲಿಂ ಸಮುದಾಯದ ಕೆಲ ಕಾರ್ಯಕರ್ತರು ಹಾಗೂ ಮುಖಂಡರಿಂದ ತೀವ್ರ ಆಕ್ರೋಶ ವ್ಯಕ್ತವಾದ್ದರಿಂದ ಸರ್ಕಾರ ಪ್ರಶಸ್ತಿ ತಡೆಹಿಡಿದಿದೆ. 2 ವರ್ಷಗಳ ಹಿಂದೆ ನಡೆದ ಹಿಜಾಬ್ ವಿವಾದ ಇದಕ್ಕೆ ಪ್ರಮುಖ ಕಾರಣವಾಗಿದೆ. ಸರ್ಕಾರಿ ಆದೇಶದ ಹಿನ್ನೆಲೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ತರಗತಿ ಕೊಠಡಿ ಪ್ರವೇಶಿಸಲು ಪ್ರಾಂಶುಪಾಲ ಬಿಜಿ ರಾಮಕೃಷ್ಣ ನಿರಾಕರಿಸಿದ್ದರು. ಈ ಹಿಜಾಬ್ ವಿಷಯವನ್ನು ಸಮಿತಿ ಕಡೆಗಣಿಸಿದೆ ಅನಿಸಿದೆ. ಸಮಸ್ಯೆ ಇದೆ ಎಂಬುದು ನಿನ್ನೆ ಗೊತ್ತಾದಾಗ ಪ್ರಶಸ್ತಿ ನೀಡುವುದನ್ನು ಸದ್ಯಕ್ಕೆ ತಡೆಹಿಡಿದಿದ್ದೇವೆ. ಪರಿಶೀಲಿಸಿ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಸರ್ಕಾರದ ನಡೆ ತೀವ್ರ ಟೀಕೆಗೆ ಗುರಿಯಾಗಿದೆ.
KSRTC ಬಸ್ ಹಾಗೂ ಶಾಲಾ ವಾಹನ ನಡುವೆ ಅಪಘಾತ: ಇಬ್ಬರು ಮಕ್ಕಳ ಸಾವು
KSRTC ಬಸ್ ಹಾಗೂ ಶಾಲಾ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಹಲವು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಬಳಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದರೆ, ಒಬ್ಬ ಬಾಲಕ ಹಾಗೂ ಚಾಲಕನ ಸ್ಥಿತಿ ಗಂಭೀರವಾಗಿದೆ. ಮೂರು ಮಕ್ಕಳ ಕಾಲುಗಳು ತುಂಡಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೃತಪಟ್ಟ ಮಕ್ಕಳ ಪಾಲಕರಿಗೆ ತಲಾ 5 ಲಕ್ಷ ರೂ. ಹಾಗೂ ರಸ್ತೆ ಸಾರಿಗೆ ಸಂಸ್ಥೆಯಿಂದಲೂ ಪರಿಹಾರ ಕೊಡಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಾದ ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಕೇಸ್ ಬಗ್ಗೆ ಹಲವು ಮಾಹಿತಿಗಳು ಬಹಿರಂಗವಾಗಿದೆ. ಚಾರ್ಜ್ ಶೀಟ್ ನಲ್ಲಿರುವ ಮಾಹಿತಿಯ ಪ್ರಕಾರ, ಹತ್ಯೆಯಾಗುವುದಕ್ಕೂ ಮುನ್ನ ಹಲ್ಲೆಗೀಡಾಗಿದ್ದ ರೇಣುಕಾಸ್ವಾಮಿ ಕೈಮುಗಿದು ಕಣ್ಣೀರು ಸುರಿಸಿ ಅಂಗಲಾಚುತ್ತಿರುವ ಫೋಟೋ ಬಹಿರಂಗವಾಗಿದೆ. ಪಟ್ಟಣಗೆರೆ ಶೆಡ್ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದ್ದು ಪ್ರಕರಣದ A10 ಆರೋಪಿ ವಿನಯ್ ಸ್ಮಾರ್ಟ್ಫೋನ್ನಿಂದ ಡಿಲೀಟ್ ಮಾಡಿದ್ದ. ರೇಣುಕಾಸ್ವಾಮಿಯವರ 2 ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಮಾತನಾಡಿರುವ ಸಂತ್ರಸ್ತ ವ್ಯಕ್ತಿಯ ತಂದೆ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ನಿಜಕ್ಕೂ ಮನುಷ್ಯರಲ್ಲ, ರಾಕ್ಷಸರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೋಟೊ ನೋಡಿದರೆ ದಿಗ್ಭ್ರಮೆಯಾಗುತ್ತಿದೆ. ಸರ್ಕಾರ ನನ್ನ ಮಗನಿಗಾದಂತೆ ಅವರಿಗೂ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈಮಧ್ಯೆ, ದರ್ಶನ್ ಇರುವ ಬಳ್ಳಾರಿ ಜೈಲಿಗೆ ಎದುರು ಇಂದು ಹೈಡ್ರಾಮ ನಡೆದಿದ್ದು ಬೆಂಗಳೂರಿನ ಕೆಂಗೇರಿ ಬಳಿಯ ಅವರ ಮಹಿಳಾ ಅಭಿಮಾನಿ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಬಂದಿದ್ದರು. ದರ್ಶನ್ ನೋಡಲು ಜೈಲೊಳಗೆ ಬಿಡಿ, ಅವರ ಕುಟುಂಬ ಸದಸ್ಯರನ್ನು ಮಾತ್ರ ಬಿಡ್ತೀವಿ ಅಂತ ನೀವು ಹೇಳೊದಾದ್ರೆ ಅವರನ್ನು ಮದುವೆಯಾಗಲೂ ಸಿದ್ಧಳಿದ್ದೇನೆ ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಟಿಯರ ಮೇಲಾಗುತ್ತಿರುವ ಲೈಂಗಿಕ ಕಿರುಕುಳ, ಶೋಷಣೆ ಅಧ್ಯಯನಕ್ಕೆ ಸಮಿತಿ ರಚಿಸುವಂತೆ Film Industry for Rights and Equality (FIRE) ಸದಸ್ಯರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಸಾಮಾಜಿಕ ಕಾರ್ಯಕರ್ತ, ನಟ ಚೇತನ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗ, ಕೇರಳದ ನ್ಯಾಯಮೂರ್ತಿ ಹೇಮಾ ಸಮಿತಿ ಮಾದರಿಯಲ್ಲಿ ಸಮಿತಿ ರಚಿಸಲು ಮನವಿ ಮಾಡಿದೆ. ಈ ಸಂಬಂಧ 130ಕ್ಕೂ ಅಧಿಕ ಮಂದಿ ಸಹಿ ಮಾಡಿರುವ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ
19 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಗುಣತೀರ್ಥವಾಡಿ ಗ್ರಾಮದಲ್ಲಿ ವರದಿಯಾಗಿದೆ. ಸಂತ್ರಸ್ತ ಯುವತಿ ಮನೆಯಿಂದ ನಾಪತ್ತೆಯಾದ ಕೆಲವು ದಿನಗಳಲ್ಲಿ ಆಕೆಯ ಶವ ಪತ್ತೆಯಾಗಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಯುವತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದು ನಂತರ ಆಕೆಯ ದೇಹವನ್ನು ಪೊದೆಗೆ ಎಸೆದಿದ್ದಾರೆ. ಸಂತ್ರಸ್ತೆ ಆಗಸ್ಟ್ 29 ರಿಂದ ನಾಪತ್ತೆಯಾಗಿದ್ದು, ಈ ಸಂಬಂಧ ಆಕೆಯ ಪೋಷಕರು ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.