ಬೆಂಗಳೂರು: ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ ಮೂರನೇ ಹಂತ ಯೋಜನೆ ಆರಂಭಿಸಲು ಉತ್ಸುಕದಲ್ಲಿದೆ. ಬಹುಕೋಟಿ ವೆಚ್ಚದ ಈ ಯೋಜನೆಗೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವೂ ಅನುಮೋದನೆ ನೀಡಿದೆ. ಆದರೆ, ಈ ನಡುವಲ್ಲೇ ಸರ್ಕಾರದ ಹೊಸ ಪ್ರಸ್ತಾವನೆಯೊಂದು ಅಧಿಕಾರಿಗಳ ತಲೆಬಿಸಿಯಾಗುವಂತೆ ಮಾಡಿದೆ.
ಮೂರು ಎಲಿವೆಟೆಡ್ ಕಾರಿಡಾರ್‌ಗಳಲ್ಲಿ ಸರಿಸುಮಾರು 80 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಪ್ಲಾನ್ ಮಾಡಲಾಗಿದೆ. 15,611 ಕೋಟಿ ರೂ.ಗಳ ಹಂತ-3 ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಯೋಜನೆ ಆರಂಭಿಸಲು ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮವು ಸಂಪುಟ ಅಂತಿಮ ಅನುಮೋದನೆಗಾಗಿ ಕಾಯುತ್ತಿತ್ತು. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರ ಮುಂದಿನ ಎಲ್ಲ ನೂತನ ಮೆಟ್ರೋ ಮಾರ್ಗಗಳು ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಿಸಬೇಕು ಎಂದು ಸೂಚಿಸಿತ್ತು.
ಇತ್ತೀಚೆಗಷ್ಟೇ ಜಯನಗರದ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ವರೆಗೆ ಡಬಲ್ ಡೆಕ್ಕರ್ ಮಾರ್ಗದಲ್ಲಿ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡುವ ವೇಳೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಮುಂದಿನ ದಿನಗಳಲ್ಲಿ ಹೊಸ ಮೆಟ್ರೊ ಮಾರ್ಗಗಳನ್ನು ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು.
ಸರ್ಕಾರದ ಈ ಸೂಚನೆಯು ವರ್ಷಗಳ ಕಾಲ ಅಧ್ಯಯನ ಮಾಡಿ, ಜಾಗ ಗುರುತಿಸಿ, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ಅಡೆತಡೆ ನಿವಾರಿಸಿ ಅನುಮೋದನೆ ಪಡೆದಿದ್ದ ಅಧಿಕಾರಿಗಳಿಗೆ ಹೊಸ ತಲೆನೋವನ್ನು ಸೃಷ್ಟಿಸಿದೆ.
ಈ ಡಬಲ್ ಡೆಕ್ಕರ್ ಮಾದರಿ ಮೆಟ್ರೋ ಮಾರ್ಗ ನಿರ್ಮಾಣದ ನಿರ್ಧಾರ (ಹೊಸ ಪ್ರಸ್ತಾವನೆ) ಬಿಎಂಆರ್‌ಸಿಎಲ್‌ಗೆ ಅಡ್ಡಿ ಆಗಲಿದೆ ಎಂಬುದು ಅಧಿಕಾರಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಸಾರ್ವಜನಿಕ ಹೂಡಿಕೆ ಮಂಡಳಿ ಒಪ್ಪಿಗೆ ನೀಡಿತ್ತು. ತದನಂತರವೇ ಹಣಕಾಸು ಸಚಿವಾಲಯವು ಅನುಮೋದನೆ ನೀಡಿತ್ತು. ಇದರ ಬೆನ್ನಲ್ಲೆ ಇನ್ನೇನು ಕೇಂದ್ರ ಸಂಪುಟದಿಂದ ಒಪ್ಪಿಗೆ ಸಿಗುತ್ತದೆ. ತಕ್ಷಣವೇ ಯೋಜನೆ ಆರಂಭಿಸಿದರಾಯಿತು ಎಂದುಕೊಂಡಿದ್ದ ಬಿಎಂಆರ್‌ಸಿಎಲ್‌ಗೆ ರಾಜ್ಯ ಸರ್ಕಾರದ ಡಬಲ್ ಡೆಕ್ಕರ್ ಮಾದರಿಯಲ್ಲಿ ಮೆಟ್ರೋ ಮಾರ್ಗ ನಿರ್ಮಾಣ ಪ್ರಸ್ತಾವ ಸವಾಲು ಒಡ್ಡಿದೆ.
ಯೋಜನೆಗೆ ಒಂದು ವೇಳೆ ಅನುಮೋದನೆ ದೊರೆತರೂ ನಮ್ಮ ಮೆಟ್ರೋ 3ನೇ ಹಂತ ಕಾಮಗಾರಿ ಆರಂಭವಾಗುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಯೋಜನೆ ಮತ್ತೊಮ್ಮೆ ಪ್ಲಾನ್ ಸಿದ್ದಪಡಿಸಿ, ಅಂದಾಜು ವೆಚ್ಚ ಪರಿಷ್ಕರಿಸಿ, ಇವೆಲ್ಲವುಗಳನ್ನು ಮತ್ತೆ ಚರ್ಚಿಸಿ ಸಂಬಂಧಿಸಿದ ಇಲಾಖೆಗಳಿಂದ ಮತ್ತೆ ಅನುಮೋದನೆ ಪಡೆಯುವ ಅನಿವಾರ್ಯತೆ ಎದುರಾಗಿದೆ. ಹೀಗಾದರೆ ಮತ್ತಷ್ಟು ವರ್ಷಗಳ ಕಾಲ ಮೂರು ಕಾರಿಡಾರ್‌ನಲ್ಲಿ ನಿರ್ಮಾಣವಾಗಬೇಕಿದ್ದ ಹಾಗೂ ನಮ್ಮ ಮೆಟ್ರೋ ಪ್ರಮುಖ ಯೋಜನೆ ವಿಳಂಬವಾಗುವ ಸಾಧ್ಯತೆ ಇದೆ.
BMRCL ನ ಮೌಲ್ಯಮಾಪನದ ಪ್ರಕಾರ, 3ನೇ ಹಂತದ ಯೋಜನೆಯಲ್ಲಿ ಡಬಲ್ ಡೆಕ್ಕರ್‌ಗಳನ್ನು ಅಳವಡಿಸಲು ಸುಮಾರು 8,900 ಕೋಟಿ ರೂ ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ.
44.65-ಕಿಮೀ ಹಂತ-3 ಯೋಜನೆಯ 40.65 ಕಿಮೀವರೆಗೆ ಭೂಸ್ವಾಧೀನ ಸೇರಿದಂತೆ ಪ್ರತಿ ಕಿಮೀಗೆ 215 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ರಾಗಿಗುಡ್ಡ ಡಬಲ್ ಡೆಕ್ಕರ್ ಮೇಲ್ಸೇತುವೆಗೆ ನಾವು ಮಾಡಿದ ವೆಚ್ಚವನ್ನು ಆಧರಿಸಿ ಈ ಲೆಕ್ಕಾಚಾರವನ್ನು ಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜ್ಯ ಸರ್ಕಾರವು ತಾತ್ವಿಕ ಒಪ್ಪಿಗೆಯಿಂದಾಗಿ BMRCL ಲೈನ್‌ಗೆ ಅಗತ್ಯವಿರುವ ಭೂಮಿಯನ್ನು ಗುರುತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತು. ಯೋಜನೆ ತ್ವರಿತ ಅನುಷ್ಠಾನಕ್ಕಾಗಿ, ಜೆಪಿ ನಗರ 4ನೇ ಹಂತದಿಂದ ಕೆಂಪಾಪುರದವರೆಗಿನ 32.15-ಕಿಮೀ ಓಆರ್ಆರ್ ಕಾರಿಡಾರ್ ಅನ್ನು ಎರಡು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿತ್ತು. ಜೆಪಿ ನಗರ-ಮೈಸೂರು ರಸ್ತೆ, ಮೈಸೂರು ರಸ್ತೆ-ಹೆಬ್ಬಾಳ, ಹೆಬ್ಬಾಳ-ಕೆಂಪಾಪುರ ಮತ್ತು ಹೊಸಹಳ್ಳಿ-ಕಡಬಗೆರೆ ಎಂದು ವಿಂಗಡಿಸಲಾಗಿತ್ತು. ಹೊಸಹಳ್ಳಿ-ಕಡಬಗೆರೆವರೆಗಿನ 12.5 ಕಿ.ಮೀ ಮಾಗಡಿ ರಸ್ತೆ ಕಾರಿಡಾರ್‌ಗೆ ಭೂಸ್ವಾಧೀನ ಇನ್ನೂ ಆರಂಭವಾಗಿರಲಿಲ್ಲ.
ಜೆಪಿ ನಗರದಿಂದ ಮೈಸೂರಿಗೆ 30,326 ಚದರ ಮೀಟರ್ ಭೂಮಿ ಬೇಕು. ಇದಕ್ಕಾಗಿ 303 ಕಡಿಮೆ ಚದರ ಮೀಟರ್ ವುಳ್ಳ ಭೂಮಿಗಳನ್ನು ನ್ನು ಗುರುತಿಸಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದ್ದೆವು. ಸರ್ಕಾರದ ಹೊಸ ಪ್ರಸ್ತಾವನೆಯಿಂದಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಸೆಕ್ಷನ್ 28 (1) ರ ಅಡಿಯಲ್ಲಿ ಭೂಮಾಲೀಕರಿಗೆ ಪ್ರಾಥಮಿಕ ಅಧಿಸೂಚನೆಯನ್ನು ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಯೋಜನೆಗೆ ಹೆಚ್ಚಿನ ಭೂಮಿ ಅಗತ್ಯವಿದ್ದು, ಯೋಜನೆಯನ್ನು ಪರಿಷ್ಕರಿಸಬೇಕಿದೆ. ಅಲ್ಲದೆ, ಯೋಜನೆಯ ವೆಚ್ಚವೂ ಹೆಚ್ಚಾಗಲಿದೆ. ಹೀಗಾಗಿ ಯೋಜನೆ ಪೂರ್ಣಗೊಳ್ಳಲು ಕನಿಷ್ಠ 2 ವರ್ಷಗಳಾದರೂ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.