ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಶಾಸಕರು/ಸಂಸದರ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಹಗರಣದ ಮಾಸ್ಟರ್ ಮೈಂಡ್ ಎಂದು ಇಡಿ ತನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ. ಕರ್ನಾಟಕ ಪೊಲೀಸ್‌ನ ಅಪರಾಧ ತನಿಖಾ ಇಲಾಖೆ(ಸಿಐಡಿ) ಅಡಿಯಲ್ಲಿ ರಚನೆಯಾಗಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಸಲ್ಲಿಸಿದ ಚಾರ್ಜ್‌ಶೀಟ್, ಇಡಿ ಚಾರ್ಜ್ ಶೀಟ್ ಗೆ ವಿರುದ್ಧವಾಗಿದೆ. ಎಸ್ಐಟಿ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ನಾಗೇಂದ್ರ ಅವರ ಹೆಸರನ್ನು ಉಲ್ಲೇಖಿಸಿಲ್ಲ ಮತ್ತು ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ED ಚಾರ್ಜ್‌ಶೀಟ್‌ನಲ್ಲಿ ನಾಗೇಂದ್ರ ಮತ್ತು ಇತರ ನಾಲ್ವರು ಆರೋಪಿಗಳನ್ನು ಹೆಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ನಲ್ಲಿರುವ ವರದಿಯನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂಬ ನಟ ದರ್ಶನ್ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದ್ದು, ಆರೋಪ ಪಟ್ಟಿಯ ಯಾವುದೇ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಸೂಚಿಸಿದೆ. ಮುಂದಿನ ವಿಚಾರಣೆಯವರೆಗೂ ನಿರ್ಬಂಧ ಜಾರಿಯಲ್ಲಿರಲಿದೆ. ಇನ್ನು ಚಾರ್ಜ್ ಶೀಟ್ ಸಾರ್ವಜನಿಕವಾಗುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಚಾರ್ಜ್ ಶೀಟ್ ವಿವರಗಳು ಸಾರ್ವಜನಿಕವಾಗುವುದರಿಂದ ನ್ಯಾಯಾಲಯದ ಪ್ರಕ್ರಿಯೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಎಂದಿದ್ದು, ಈ ಪ್ರಕರಣದ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸುವ ಸಾಧ್ಯತೆಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಕರ್ತವ್ಯ ನಿರತ ವೈದ್ಯರ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆದು, ಎಳೆದಾಡಿರುವ ಘಟನೆ ಚಿಕ್ಕಮಗಳೂರಿನ ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕೂಡಲೇ ಜಿಲ್ಲಾಸ್ಪತ್ರೆ ವೈದರು ಮತ್ತು ಸಿಬ್ಬಂದಿ ಹೊರ ರೋಗಿ ವಿಭಾಗ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಗಲಾಟೆಯೊಂದರಲ್ಲಿ ಗಾಯವಾಗಿ ಆಸ್ಪತ್ರೆಗೆ ಬಂದಿದ್ದ ಇರ್ಷಾದ್ ಎಂಬ ಮಹಿಳೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದರು. ಆಕೆಯೊಂದಿಗೆ ಬಂದಿದ್ದ ಎಲ್ಲರೂ ಒಟ್ಟಿಗೇ ತುರ್ತು ಚಿಕಿತ್ಸಾ ವಿಭಾಗಕ್ಕೆ ಪ್ರವೇಶಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೂಳೆ ತಜ್ಞ ವೆಂಕಟೇಶ್ ಹೊರ ಹೋಗುವಂತೆ ಹೇಳಿದಾಗ ರೊಚ್ಚಿಗೆದ್ದ ಗಾಯಾಳು ಸಂಬಂಧಿ ತಸ್ಲಿಮಾ ವೈದ್ಯರ ಕೊರಳ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಅಲ್ಲದೇ ಚಪ್ಪಲಿ ಬಿಚ್ಚಿ ಎಸೆದಿದ್ದಾರೆ. ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಸಿಟಿ ರವಿ, ಇಂತಹ ನೀಚ ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಿ ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಡಿಜಿಪಿ ಅಲೋಕ್ ಮೋಹನ್ ಅವರನ್ನು ಒತ್ತಾಯಿಸಿದ್ದಾರೆ.
ಡ್ರಗ್ಸ್ ಮಾರಾಟ ಮಾಡುತ್ತಿದ್ದ ಓರ್ವ ಮಹಿಳಾ ವಿದೇಶಿ ಪೆಡ್ಲರ್ ಸೇರಿ 7 ಮಂದಿ ಡ್ರಗ್ ಪೆಡ್ಲರ್ ಗಳನ್ನು ನಗರ ಪೊಲೀಸರು ಬಂಧಿಸಿದ್ದು, 3 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 2.99 ಕೋಟಿ ಮೌಲ್ಯದ ಗಾಂಜಾ, ಹೆರಾಯಿನ್, ಎಂಡಿಎಂಎ ಕ್ರಿಸ್ಟಲ್, ಎಂಡಿಎಂಎ ಎಕ್ಸ್ ಟೇಸ್ಸಿ ಫಿಲ್ಸ್, ಎಲ್ ಎಸ್ ಡಿ, ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
ಕರ್ನಾಟಕ ಅಪಾರ ಅವಕಾಶಗಳನ್ನು ಒದಗಿಸುವ ರಾಜ್ಯವಾಗಿದ್ದು ಉದ್ಯಮಶೀಲತೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಪೋಷಿಸುವ ವಾತಾವರಣವನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಯು.ಎಸ್. ಇಂಡಿಯಾ ಬಿಸಿನೆಸ್ ಕೌನ್ಸಿಲ್ ಪ್ರತಿನಿಧಿಗಳನ್ನು ಭೇಟಿ ಮಾಡಿರುವ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ವೈವಿಧ್ಯಮಯ ಸಂಪನ್ಮೂಲಗಳ ನಾಡಾಗಿದ್ದು, ಕರ್ನಾಟಕ ಮತ್ತು ಯುನೈಟೆಡ್ ಸ್ಟೇಟ್ಸ್ ಮಧ್ಯೆ ಇರುವ ಸದೃಢ ಮತ್ತು ಕ್ರಿಯಾತ್ಮಕ ಪಾಲುದಾರಿಕೆಗೆ ಇಂದಿನ ಚರ್ಚೆ ಸಾಕ್ಷಿಯಾಗಿದೆ. ಸಭೆಯಲ್ಲಿ ಕೇವಲ ವ್ಯಾವಹಾರಿಕ ಅವಕಾಶಗಳನ್ನಷ್ಟೇ ಚರ್ಚೆ ಮಾಡಿಲ್ಲ. ಹಿಂದೆಂದಿಗಿಂತಲೂ ಹೆಚ್ಚಿನ ಸಂಪರ್ಕ ಸಾಧಿಸುವ ಹಾಗೂ ಭವಿಷ್ಯದಲ್ಲಿ ಹೆಚ್ಚು ಸಮೃದ್ಧಿಯನ್ನು ತರುವ ನೀಲನಕ್ಷೆಯನ್ನು ರೂಪಿಸುತ್ತಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.