ಬೆಂಗಳೂರು: ನಗರದಲ್ಲಿನ ಪಿಜಿಗಳ ಪ್ರಸ್ತಾವಿತ ಮಾರ್ಗಸೂಚಿ ಪರಿಷ್ಕರಿಸಲು ಹಾಗೂ ನಿಯಮಗಳ ಅಳವಡಿಕೆಗೆ ನೀಡಲಾಗಿದ್ದ ಗಡುವನ್ನು ವಿಸ್ತರಿಸಲು ಬಿಬಿಎಂಪಿ ನಿರ್ಧರಿಸಿದ್ದು, ಪಿಜಿಗಳ ಮಾಲೀಕರು ತುಸು ನಿರಾಳವಾಗುವ ಸಾಧ್ಯತೆಯಿದೆ.
ಪಿಜಿ ಮಾಲೀಕರ ನಿಯೋಗವೊಂದು ಇತ್ತೀಚಿಗೆ ವಿಶೇಷ ಆಯುಕ್ತ ಸುರಳ್ಕರ್ ವಿಕಾಶ್ ಕಿಶೋರ್ ಅವರನ್ನು ಭೇಟಿ ಮಾಡಿದ್ದು, ಪ್ರತಿ ವ್ಯಕ್ತಿ ವಾಸಿಸುವ ಜಾಗ ಸೇರಿದಂತೆ ಕೆಲವೊಂದು ಮಾರ್ಗಸೂಚಿಗಳನ್ನು ಪರಿಷ್ಕರಿಸುವಂತೆ ಮನವಿ ಮಾಡಿತು.
ಪ್ರಸ್ತಾವಿತ ಮಾರ್ಗಸೂಚಿಯಲ್ಲಿರುವಂತೆ ಪ್ರತಿ ವ್ಯಕ್ತಿಗೆ 70 ಚದರ ಅಡಿ ಜಾಗ ಬದಲಿಗೆ 35 ಚದರ ಅಡಿ ಇರುವಂತೆ ಅವಕಾಶ ನೀಡಬೇಕು, ಸಿಸಿಟಿವಿ ದೃಶ್ಯಗಳ ಸಂರಕ್ಷಣೆಗೆ 90 ದಿನಗಳ ಬದಲಿಗೆ ಒಂದು ತಿಂಗಳು ಇರುವಂತೆ ಮಾರ್ಗಸೂಚಿ ಇರುವಂತೆ ಪರಿಷ್ಕರಿಸಬೇಕು ಎಂದು ಮಾಲೀಕರು ಬಿಬಿಎಂಪಿಗೆ ಮನವಿ ಮಾಡಿದರು.
ಪಿಜಿ ಮಾಲೀಕರ ಕಳವಳ ಸರಿಯಾಗಿರುವಂತೆ ತೋರುತ್ತಿದ್ದು, ಅವರ ಮನವಿಯನ್ನು ಮುಖ್ಯ ಆಯುಕ್ತರಿಗೆ ರವಾನಿಸುವುದಾಗಿ ಕಿಶೋರ್ ಹೇಳಿದರು. ಈ ಮೊದಲು ಮಾರ್ಗಸೂಚಿ ಹೊರಡಿಸಿದ್ದ ಬಿಬಿಎಂಪಿ ಅವುಗಳ ಅಳವಡಿಕೆಗೆ ಸೆಪ್ಟೆಂಬರ್ 15ರ ಗಡುವು ನೀಡಿತ್ತು. ಮಾರ್ಗಸೂಚಿ ಪಾಲಿಸದಿದ್ದರೆ ಕಟ್ಟಡಗಳನ್ನು ಸೀಲ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಪ್ರತಿ ವ್ಯಕ್ತಿಗೆ 70 ಚದರ ಅಡಿ ಜಾಗ ಮತ್ತು 90 ದಿನಗಳವರೆಗೆ ಸಿಸಿಟಿವಿ ದೃಶ್ಯಗಳ ಸಂಗ್ರಹ ಮುಂತಾದ ಮಾರ್ಗಸೂಚಿಗಳನ್ನು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ವಿರೋಧಿಸಿದೆ.
ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಸಾಧ್ಯತೆಯೊಂದಿಗೆ ನೀಡಲಾಗಿರುವ ಗಡುವನ್ನು ವಿಸ್ತರಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಸಂಘದ ಸದಸ್ಯರು ವಿಕ್ಟೋರಿಯಾ ಆಸ್ಪತ್ರೆಯ ವಾರ್ಡ್‌ಗಳಿಗೆ ಮತ್ತು ಕೆಲವು ಸರ್ಕಾರಿ ವಸತಿ ನಿಲಯಗಳ ಕೊಠಡಿಗಳಿಗೆ ಭೇಟಿ ನೀಡಿ ವಿಶೇಷ ಆಯುಕ್ತರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು ಎಂದು ಸಂಘದ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯ ಕೆಲವು ವಾರ್ಡ್‌ಗಳಲ್ಲಿ 20 ಹಾಸಿಗೆಗಳು ಮತ್ತು ಎರಡು ಸ್ನಾನಗೃಹಗಳಿವೆ. ಇದೇ ರೀತಿಯ ಸೌಲಭ್ಯಗಳನ್ನು ಹೊಂದಿರುವ ಅನೇಕ ಬಿಬಿಎಂಪಿ ಹಾಸ್ಟೆಲ್‌ಗಳಿವೆ. ಅಲ್ಲಿ ಒಬ್ಬ ವ್ಯಕ್ತಿಗೆ ಒದಗಿಸಲಾದ ಜಾಗ 20X14 ಅಡಿ ಜಾಗ ಆಗಿದೆ. ಕೆಲವು ಮಾರ್ಗಸೂಚಿಗಳನ್ನು ಸಡಿಲಿಸಲು ಮತ್ತು ಅವುಗಳ ಪಾಲನೆಗೆ ನೀಡಲಾದ ಗಡುವನ್ನು ವಿಸ್ತರಿಸಲು ಒತ್ತಾಯಿಸಿ ವಿಶೇಷ ಆಯುಕ್ತರಿಗೆ ಮನವಿ ಮಾಡಿದ್ದೇವೆ. ಪಾಲಿಕೆ ಅಧಿಕಾರಿಗಳು ನಮ್ಮ ಮನವಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಕುಮಾರ್ ಹೇಳಿದರು.
ಪ್ರಸ್ತಾವಿತ ಮಾರ್ಗಸೂಚಿಗಳಂತೆ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು 5,000 ರೂ. ಬಾಡಿಗೆ ಪಾವತಿಸಲು ಕಷ್ಟವಾಗುತ್ತದೆ. ಉದ್ದೇಶಿತ ಮಾರ್ಗಸೂಚಿಗಳನ್ನು ಪರಿಚಯಿಸಿದರೆ ಬಾಡಿಗೆ ಹೆಚ್ಚಿಸಬೇಕಾಗುತ್ತದೆ. ವಸತಿ ಪ್ರದೇಶಗಳಲ್ಲಿ ಪಿಜಿ ಸೌಲಭ್ಯಗಳನ್ನು ನಡೆಸಲು ಹೊಸ ಪರವಾನಗಿಗಳನ್ನು ನವೀಕರಿಸಲು ಮತ್ತು ನೀಡಲು ಪಾಲಿಕೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು.