ಯಾದಗಿರಿ/ಕಲಬುರಗಿ: ತಮ್ಮ ಬೇಡಿಕೆಗಳಿಗೆ ಸರ್ಕಾರ ಕಿವಿಗೊಡದ ಕಾರಣ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವಾಪುರ ಮತ್ತು ಗೋನಾಳ್ ಗ್ರಾಮಗಳನ್ನು ತೆಲಂಗಾಣ ರಾಜ್ಯದೊಂದಿಗೆ ವಿಲೀನಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಿವೇಶನದ ಹಕ್ಕು ಪತ್ರಗಳ (ಪಹಣಿ) ಸಮಸ್ಯೆ ಪರಿಹರಿಸುವಂತೆ ಕಳೆದ 65 ವರ್ಷಗಳಿಂದ ಜಿಲ್ಲಾಡಳಿತಕ್ಕೆ 825 ಬಾರಿ ಮನವಿ ಪತ್ರ ಸಲ್ಲಿಸಿದ್ದರೂ, ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಎರಡು ಗ್ರಾಮಗಳ 850ಕ್ಕೂ ಹೆಚ್ಚು ರೈತರಿಗೆ ಸೇರಿದ 10 ಸಾವಿರ ಎಕರೆಗೂ ಹೆಚ್ಚು ಜಮೀನಿಗೆ ಹಕ್ಕು ಪತ್ರ ನೀಡಿಲ್ಲ. ದಾಖಲೆಗಳಿಲ್ಲದ ಕಾರಣ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ನಮ್ಮ ಗ್ರಾಮಗಳಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ತೆಲಂಗಾಣದ ಕೃಷ್ಣಾ ಗ್ರಾಮದ ರೈತರಿಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇದೇ ವೇಳೆ ಗ್ರಾಮಗಳಿಗೆ ವಿಶೇಷ ಅಧಿಕಾರಿಯಾಗಿರುವ ಯಾದಗಿರಿಯ ಸಹಾಯಕ ಆಯುಕ್ತರನ್ನು ಹಾಗೂ ತಹಶೀಲ್ದಾರ್ ರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ವಿಫಲವಾದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಕೆ ಹಾಕಿದ್ದಾರೆ.