ಬೆಂಗಳೂರು: ಕೇಂದ್ರ ಸರ್ಕಾರ ಪ್ಯಾಲೆಸ್ತೇನ್ ಗೆ ಬೆಂಬಲ ವ್ಯಕ್ತಪಡಿಸಿರುವಾಗ ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ಯಾಲೆಸ್ತೇನ್ ಬಾವುಟ ಪ್ರದರ್ಶನ ಸಂಬಂಧ ಬಂಧಿಸಲಾಗಿರುವ ಆರೋಪಿಗಳು ಹೇಳಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬುಧವಾರ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೇನ್ ಧ್ವಜ ಪ್ರದರ್ಶನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಈ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಿದ್ದೇವೆ. ಕೇಂದ್ರ ಸರ್ಕಾರ ಪ್ಯಾಲೆಸ್ತೇನ್ ಗೆ ಬೆಂಬಲ ನೀಡಿರುವಾಗ ನಾವು ಏನು ತಪ್ಪು ಮಾಡಿಲ್ಲ ಎಂದು ಅವರು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಆರೋಪಿಗಳು ಸದ್ಯ ಬಂಧನದಲ್ಲಿದ್ದು, ವಿಚಾರಣೆ ಮುಂದುವರೆದಿದೆ. ಬಾವುಟ ಪ್ರದರ್ಶಿಸಿ ಎಂದು ಅವರಿಗೆ ಹೇಳಿದವರು ಯಾರೆಂಬ ಬಗ್ಗೆ ಮಾಹಿತಿ ತಿಳಿಯಲು ವಿಚಾರಣೆ ನಡೆಯುತ್ತಿದೆ. ಆರೋಪಿಗಳೆಲ್ಲರೂ 17 ರಿಂದ 21 ವರ್ಷದೊಳಗಿನವರಾಗಿದ್ದಾರೆ ಎಂದರು.
ನಾಗಮಂಗಲ ಗಲಭೆ ವೇಳೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಇಂತಹ ಘೋಷಣೆಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲ. ಕೆಲವರು ಸುಳ್ಳು ಹೇಳಿಕೆ ನೀಡುತ್ತಿದ್ದು, ಈ ವಿಚಾರ ಕುರಿತು ಪರಿಶೀಲಿಸಲಾಗುತ್ತಿದೆ. ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ತನಿಖಾ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.