ಮಂಗಳೂರು: ಈ ಹಿಂದೆ ಎಲ್‌ಪಿಜಿ ಸಬ್ಸಿಡಿ ಕೈಬಿಟ್ಟಂತೆ ಗ್ಯಾರಂಟಿ ಯೋಜನೆಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಲು ಅವಕಾಶ ಕಲ್ಪಿಸುವ ಪ್ರಸ್ತಾಪವಿದೆ ಎಂದು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ಬುಧವಾರ ಹೇಳಿದ್ದಾರೆ.
ಇಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪರಿಶೀಲನಾ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಮರನಾಥ್, ಗ್ಯಾರಂಟಿ ಯೋಜನಗಳನ್ನು ಬಿಟ್ಟುಕೊಡಲು ಬಯಸುವ ಫಲಾನುಭವಿಗಳು ಇರಬಹುದು ಮತ್ತು ಅವರಿಗೆ ಆಯ್ಕೆಯನ್ನು ನೀಡಲಾಗುವುದು ಎಂದರು.
ಗೃಹಲಕ್ಷ್ಮಿಸೇರಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ನಮ್ಮ ಗುರಿ. ಆದರೆ ಯಾರಿಗೆ ಈ ಯೋಜನೆಗಳ ಅಗತ್ಯವಿಲ್ಲ ಅನಿಸುತ್ತದೆಯೋ ಅಂಥವರು ಸ್ವಯಂ ಪ್ರೇರಣೆಯಿಂದ ಯೋಜನೆಯಿಂದ ಬಿಟ್ಟುಕೊಡಲು ಅವಕಾಶ ಕಲ್ಪಿಸುವ ಚಿಂತನೆ ನಡೆಸಲಾಗಿದೆ. ಈ ಹಿಂದೆ ಗ್ಯಾಸ್ ಸಬ್ಸಿಡಿ ಬೇಡದವರು ಕೈಬಿಡುವ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಅದೇ ರೀತಿ ಗ್ಯಾರಂಟಿ ಯೋಜನೆಯಲ್ಲೂ ಜಾರಿಗೆ ತರಲು ಮುಖ್ಯಮಂತ್ರಿ ಬಳಿ ಮಾತುಕತೆ ನಡೆಸಲಾಗುವುದು ಎಂದು ಪುಷ್ಪಾಅಮರನಾಥ್ ತಿಳಿಸಿದರು.
ಆದಾಯ ತೆರಿಗೆ ಪಾವತಿಸದಿದ್ದರೂ ಅನೇಕ ಅರ್ಹ ವ್ಯಕ್ತಿಗಳು ಗೃಹಲಕ್ಷ್ಮಿಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಈ ಬಗ್ಗೆ ಐಟಿ ಇಲಾಖೆಯೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸುತ್ತದೆ ಅವರು ಹೇಳಿದರು.
ಗೃಹಲಕ್ಷ್ಮಿ ಯೋಜನೆಗೆ ಹೆಚ್ಚಿನ ಸಂಖ್ಯೆಯ ಅರ್ಹ ಮಹಿಳೆಯರು ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ, ಅರ್ಹ ವ್ಯಕ್ತಿಗಳ ನೋಂದಣಿಗೆ ಅಧಿಕಾರಿಗಳಿಗೆ ಟಾರ್ಗೆಟ್ ನಿಗದಿಪಡಿಸಲಾಗುವುದು ಎಂದು ಪುಷ್ಪಾ ಅಮರನಾಥ್ ಹೇಳಿದರು.
ಗೃಹಲಕ್ಷ್ಮಿಯೋಜನೆಯಡಿ ರೇಶನ್ ಕಾರ್ಡ್ಗಳ ಆಧಾರದಲ್ಲಿ ಫಲಾನುಭವಿಗಳನ್ನು ಗುರುತಿಸಿ ಗುರಿ ನಿಗದಿಪಡಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಗೆ ಗುರುತಿಸಲಾದ ಒಟ್ಟು 4,03,333 ಮಹಿಳೆಯರಲ್ಲಿ ಶೇ.92ರಷ್ಟು ಮಂದಿಗೆ (3,69,292) ಎರಡು ಸಾವಿರ ರು. ತಲುಪುತ್ತಿದೆ. ತಮಗೆ ಅಗತ್ಯ ಇಲ್ಲ ಎಂಬ ಕಾರಣಕ್ಕೋ, ಮಾಹಿತಿ ಕೊರತೆಯಿಂದಲೋ ಅಥವಾ ಭೌತಿಕವಾಗಿ ಬಂದು ಅರ್ಜಿ ಹಾಕಲು ಸಾಧ್ಯವಿಲ್ಲದೆ ಉಳಿದವರು ಇರಬಹುದು. ಅವರೆಲ್ಲರನ್ನು ಹುಡುಕಿ ಗೃಹಲಕ್ಷ್ಮಿಗೆ ನೋಂದಣಿ ಮಾಡಿಸಿ ಶೇ.100ರಷ್ಟು ಗುರಿ ಸಾಧಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.