ಬೆಂಗಳೂರು: ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ‘ಒಂದು ರಾಷ್ಟ್ರ, ಒಂದು ಚುನಾವಣೆ’’ ಪ್ರಸ್ತಾವ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಮಾತ್ರವಲ್ಲ ಅನುಷ್ಠಾನಗೊಳಿಸಲು ಕೂಡಾ ಅಸಾಧ್ಯವಾದುದು ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಇಂತಹದ್ದೊಂದು ಮಹತ್ವದ ಪ್ರಸ್ತಾವದ ಬಗ್ಗೆ ವಿರೋಧ ಪಕ್ಷಗಳ ಜೊತೆ ಸಮಾಲೋಚನೆಯನ್ನೂ ಮಾಡದೇ ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲು ಹೊರಟಿರುವುದು ನರೇಂದ್ರ ಮೋದಿ ಸರ್ಕಾರದ ದುಷ್ಟ ಉದ್ದೇಶವನ್ನು ಅನಾವರಣಗೊಳಿಸಿದೆ. ಒಂದು ಸರ್ಕಾರದ ಆದ್ಯತೆಗಳು ಏನಿರಬೇಕೆಂಬ ಸಾಮಾನ್ಯ ಜ್ಞಾನವೂ ಕೇಂದ್ರ ಸರ್ಕಾರಕ್ಕಾಗಲಿ, ಪ್ರಧಾನಮಂತ್ರಿಯವರಿಗಾಗಲಿ ಇದ್ದ ಹಾಗೆ ಕಾಣುವುದಿಲ್ಲ ಎಂದು ಹೇಳಿದ್ದಾರೆ.
ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಲೋಕಸಭೆ ಇಲ್ಲವೇ ವಿಧಾನಸಭೆಯಲ್ಲಿ ಆಡಳಿತಾರೂಢ ಪಕ್ಷ ವಿಶ್ವಾಸಮತ ಗಳಿಸಲು ಸೋತುಹೋಗುವ ಸಂದರ್ಭದಲ್ಲಿ ಎದುರಾಗುವ ಬಿಕ್ಕಟ್ಟಿಗೆ ಈ ಪ್ರಸ್ತಾವದಲ್ಲಿ ಪರಿಹಾರವೇ ಇಲ್ಲ ಎಂದರು. ಇಂತಹ ಸಂದರ್ಭದಲ್ಲಿ ಮಧ್ಯಂತರ ಚುನಾವಣೆಯೊಂದೇ ಯೋಗ್ಯ ಪರಿಹಾರ. ಇದರ ಬದಲಿಗೆ ಸದನದಲ್ಲಿ ವಿಶ್ವಾಸ ಮತ ಗಳಿಸಲು ವಿಫಲವಾದ ಅಲ್ಪಸಂಖ್ಯಾತ ಪಕ್ಷ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗೆಯುವ ದ್ರೋಹವಾಗುತ್ತದೆ’ ಎಂದರು.
ಹೊಸ ಚುನಾವಣಾ ವ್ಯವಸ್ಥೆ ಜಾರಿಗೆ ಬರಬೇಕಾದರೆ ಮೊದಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗಿದೆ. ಇದರ ಜೊತೆಗೆ ಸಂವಿಧಾನದ ಕನಿಷ್ಠ ಐದು ವಿಧಿಗಳಿಗೆ ತಿದ್ದುಪಡಿ ತರಬೇಕಾಗಿದೆ. ಇಡೀ ದೇಶದಲ್ಲಿ ಒಂದೇ ಬಾರಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವ ಶಕ್ತಿ-ಸಾಮರ್ಥ್ಯ ನಮ್ಮ ಈಗಿನ ಚುನಾವಣಾ ಆಯೋಗಕ್ಕೆ ಇಲ್ಲ. ತನ್ನ ವೈಫಲ್ಯ ಮುಚ್ಚಿಕೊಳ್ಳಲು ಮೋದಿ ಸರ್ಕಾರ ಮಾಡುತ್ತಿರುವ ಗಿಮಿಕ್ ಇದು’ ಎಂದು ಲೇವಡಿ ಮಾಡಿದರು.
ಆಡಳಿತಾರೂಢ ಬಿಜೆಪಿ ಪಕ್ಷದ ಗುಪ್ತ ಅಜೆಂಡಾವನ್ನು ಒಳಗೊಂಡಿರುವ "ಒಂದು ದೇಶ, ಒಂದು ಚುನಾವಣೆ" ಪ್ರಸ್ತಾವವನ್ನು ಸಂಸತ್ನ ಒಳಗೆ ಮತ್ತು ಹೊರಗೆ ನಮ್ಮ ಪಕ್ಷ ಎದುರಿಸಲಿದೆ. ದೇಶದ ಜನಾಭಿಪ್ರಾಯವೂ ‘‘ಒಂದು ದೇಶ, ಒಂದು ಚುನಾವಣೆ’’ ವ್ಯವಸ್ಥೆಗೆ ವಿರುದ್ಧವಾಗಿದೆ. ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹದ್ದು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಪ್ರಾದೇಶಿಕ ಪಕ್ಷಗಳ ಬೆಳವಣಿಗೆ ತಡೆಯುವ ಮತ್ತೊಂದು ಪ್ರಯತ್ನ ಇದಾಗಿದೆ. ಬಿಜೆಪಿ ಸರ್ವಪಕ್ಷ ಸಭೆ ಕರೆದು ಎಲ್ಲ ಪಕ್ಷಗಳ ಅಭಿಪ್ರಾಯ ಪಡೆಯಬೇಕು. ಹಾಗೆ ಮಾಡದ ಹೊರತು, ಈ ಪ್ರಸ್ತಾಪಗಳು ಅರ್ಥಹೀನ ಎಂದು ಅವರು ಹೇಳಿದರು.