ಬಳ್ಳಾರಿ: ನಟ ದರ್ಶನ್ ತೂಗುದೀಪ ಅವರಿಗೆ ಸೌಲಭ್ಯ ನಿರಾಕರಿಸಿದ ಆರೋಪದ ಮೇಲೆ ಬಳ್ಳಾರಿ ಜೈಲು ಅಧಿಕಾರಿಗಳ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ಅವರ ಕುಟುಂಬಸ್ಥರು ಮುಂದಾಗಿದ್ದಾರೆ. ದರ್ಶನ್ ಅವರು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ.
ಆದರೆ ಜೈಲಿನ ಹಿರಿಯ ಅಧಿಕಾರಿಗಳು ಆರೋಪವನ್ನು ನಿರಾಕರಿಸಿದ್ದಾರೆ ಮತ್ತು ಜೈಲು ನಿಯಮಗಳ ಪ್ರಕಾರ ನಟನನ್ನು ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಆಗಸ್ಟ್ 29 ರಂದು, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಅವರಿಗೆ ವಿಶೇಷ ಸೌಲಭ್ಯ ನೀಡಿರುವ ಫೋಟೋಗಳು ವೈರಲ್ ಆದ ನಂತರ, ನಟ ಮತ್ತು ಅವರ ಸಹ-ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಯಿತು.
ನಿಯಮಾನುಸಾರ ದರ್ಶನ್ ಅವರ ಸೆಲ್ ನಲ್ಲಿ ಟೆಲಿವಿಷನ್ ಹಾಗೂ ಸರ್ಜಿಕಲ್ ಚೇರ್ ನೀಡಲಾಗಿದೆ. ಈಗ ಆತ ದಿಂಬು, ಬೆಡ್‌ಶೀಟ್ ಮತ್ತಿತರ ಬೇಡಿಕೆ ಇಡುತ್ತಿದ್ದಾರೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ, ದರ್ಶನ್ ಅವರ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಜೈಲಿನ ಸಂದರ್ಶಕರ ಕೊಠಡಿಯಲ್ಲಿ ಅವರನ್ನು ಭೇಟಿಯಾದರು.
ದರ್ಶನ್ ಅವರು ಜೈಲಿನಲ್ಲಿನ ಅನುಭವಗಳನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡ ನಂತರ, ಅವರು ತಮ್ಮ ವಕೀಲರೊಂದಿಗೆ ಈ ವಿಷಯವನ್ನು ಚರ್ಚಿಸಿದರು. ದರ್ಶನ್ ಅವರನ್ನು ವಿಚಾರಣಾಧೀನ ಕೈದಿಯಂತೆ ನಡೆಸಿಕೊಳ್ಳುತ್ತಿಲ್ಲ ಎಂದು ಕುಟುಂಬದವರು ನಂಬಿದ್ದು, ಹೀಗಾಗಿ ಎಸ್‌ಎಚ್‌ಆರ್‌ಸಿಗೆ ದೂರು ಸಲ್ಲಿಸುವಂತೆ ಅವರ ವಕೀಲರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಮ್ಮೆ, ನಾವು ಈ ವಿಷಯವನ್ನು ದರ್ಶನ್ ಅವರೊಂದಿಗೆ ಚರ್ಚಿಸುತ್ತೇವೆ ಮತ್ತು ಸಾಧ್ಯವಾದಷ್ಟು ಬೇಗ ಜೈಲು ಅಧಿಕಾರಿಗಳ ವಿರುದ್ಧ ದೂರು ನೀಡುತ್ತೇವೆ. ದರ್ಶನ್ ವಿಚಾರಣಾದೀನ ಕೈದಿಯಾಗಿದ್ದು, ಆತ ಅಪರಾಧಿಯೋ ಅಲ್ಲವೋ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ಅಲ್ಲಿಯವರೆಗೂ ಅವರಿಗೆ ಸೂಕ್ತವಾಗಿ ನಡೆಸಿಕೊಳ್ಳಬೇಕು ಎಂದು ಕುಟುಂಬದವರು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಬಳ್ಳಾರಿ ಕೇಂದ್ರ ಕಾರಾಗೃಹದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ‘ಜೈಲು ನಿಯಮಗಳ ಪ್ರಕಾರ ದರ್ಶನ್ ಅವರನ್ನು ಕೈದಿ ಎಂದು ಪರಿಗಣಿಸುತ್ತಿದ್ದೇವೆ. ನಿಯಮಗಳ ಪ್ರಕಾರ ಅವರ ಬೇಡಿಕೆಗಳ ಪ್ರಕಾರ, ನಾವು ಅವರಿಗೆ ಸರ್ಜಿಕಲ್ ಕುರ್ಚಿ ಮತ್ತು ಟಿವಿಯನ್ನು ಒದಗಿಸಿದ್ದೇವೆ. ಇನ್ನೂ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ನಾವು ಅವರ ವಿನಂತಿಯನ್ನು ನಮ್ಮ ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದೇವೆ ಅವರು ಅದರ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.