ಹೈಕೋರ್ಟ್  
ರಾಜ್ಯ

ಕೆಲ ದಿನದ ಮಟ್ಟಿಗೆ ಲೈವ್‌ ಸ್ಟ್ರೀಮಿಂಗ್‌ ನಿಲ್ಲಿಸಿ: ಮುಖ್ಯ ನ್ಯಾಯಮೂರ್ತಿಗಳಿಗೆ ವಕೀಲರ ಮನವಿ

ಇತ್ತೀಚೆಗೆ ಲೈವ್‌ ಸ್ಟ್ರೀಮಿಂಗ್‌ ಸಂದರ್ಭದಲ್ಲಿ ವಿಚಾರಣೆಯ ವೇಳೆ ನ್ಯಾಯಮೂರ್ತಿಯೊಬ್ಬರು ವ್ಯಕ್ತಪಡಿಸಿದ ವಿವಾದಾತ್ಮಕ ಅಭಿಪ್ರಾಯವು ರಾಷ್ಟ್ರದಾದ್ಯಂತ ಸುದ್ದಿಯಾಗಿದೆ.

ಬೆಂಗಳೂರು: ಕೆಲ ದಿನಗಳ ಕಾಲ ನ್ಯಾಯಾಲಯದ ಕಲಾಪಗಳನ್ನು ನೇರಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಅವರಿಗೆ ಬೆಂಗಳೂರಿನ ವಕೀಲರ ಸಂಘ ಶುಕ್ರವಾರ ಮನವಿ ಮಾಡಿದೆ.

ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಶುಕ್ರವಾರ ನ್ಯಾಯಮೂರ್ತಿ ಅಂಜಾರಿಯಾ ಅವರಿಗೆ ಪತ್ರ ಬರೆದಿದ್ದಾರೆ.

ಇತ್ತೀಚೆಗೆ ಲೈವ್‌ ಸ್ಟ್ರೀಮಿಂಗ್‌ ಸಂದರ್ಭದಲ್ಲಿ ವಿಚಾರಣೆಯ ವೇಳೆ ನ್ಯಾಯಮೂರ್ತಿಯೊಬ್ಬರು ವ್ಯಕ್ತಪಡಿಸಿದ ವಿವಾದಾತ್ಮಕ ಅಭಿಪ್ರಾಯವು ರಾಷ್ಟ್ರದಾದ್ಯಂತ ಸುದ್ದಿಯಾಗಿದೆ.

ನ್ಯಾ. ಶ್ರೀಶಾನಂದ ಅವರು ವ್ಯಕ್ತಪಡಿಸಿದ ಅಭಿಪ್ರಾಯವು ಗಂಭೀರ ವಿವಾದ ಸೃಷ್ಟಿಸಿದ್ದು, ನ್ಯಾಯಮೂರ್ತಿಗಳ ಹೇಳಿಕೆಯು ವೈರಲ್‌ ಆಗಿದೆ. ಇದರಿಂದ ವಕೀಲ ವೃತ್ತಿಯನ್ನು ಪರಿಶುದ್ಧ ಎಂದು ಪರಿಗಣಿಸಿರುವ ಹಿರಿ-ಕಿರಿಯರೆನ್ನದೇ ಎಲ್ಲಾ ವಕೀಲರ ಭಾವನೆಗಳಿಗೂ ನೋವುಂಟಾಗಿದೆ. ಇಂತಹ ಹೇಳಿಕೆಗಳಿಗೆ ವಕೀಲರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನ್ಯಾ. ಶ್ರೀಶಾನಂದ ಅವರು ಮಹಿಳಾ ವಕೀಲೆಯೊಬ್ಬರನ್ನು ಕುರಿತು ಈಚೆಗೆ ನೀಡಿರುವ ಹೇಳಿಕೆಯು ರಾಷ್ಟ್ರದ ಗಮನ ಸೆಳೆದಿದ್ದು, ಇದರಿಂದ ವಕೀಲರು ಅದರಲ್ಲೂ ಮಹಿಳಾ ವಕೀಲರನ್ನು ನ್ಯಾಯಮೂರ್ತಿಗಳು ನಡೆಸಿಕೊಳ್ಳುತ್ತಿರುವ ರೀತಿಯ ವಿಸ್ತೃತ ವಿಷಯವನ್ನು ಮುನ್ನೆಲೆಗೆ ತಂದಿದೆ. ಹೀಗಾಗಿ, ಮುಕ್ತ ನ್ಯಾಯಾಲಯದಲ್ಲಿ ವ್ಯಕ್ತಪಡಿಸುವಂತಹ ಅಭಿಪ್ರಾಯಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವವರೆಗೆ ನ್ಯಾಯಾಲಯಗಳ ಲೈವ್‌ ಸ್ಟ್ರೀಮಿಂಗ್‌ ಅನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ಕೈಮೀರಲಿದ್ದು, ಸಾರ್ವಜನಿಕರ ಮನಸ್ಸಿನಲ್ಲಿ ನ್ಯಾಯಾಲಯಗಳೆಡೆಗೆ ಇರುವ ಭಾವನೆಗೆ ಧಕ್ಕೆಯಾಗಲಿದೆ. ಈ ಕುರಿತು ತುರ್ತಾಗಿ ಕ್ರಮಕೈಗೊಳ್ಳಲಾಗುತ್ತದೆ ಎಂಬ ಆಶಾಭಾವನೆ ಹೊಂದಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅನುಮತಿ ಇಲ್ಲದೆ ಕಲಾಪದ ವಿಡಿಯೋ ಬಳಸುವಂತಿಲ್ಲ

ಈ ನಡುವೆ ವಿವಾದವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಅನುಮತಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆ ಹೊರತುಪಡಿಸಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ (ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳು) ಕಲಾಪದ ಲೈವ್‌ ಸ್ಟ್ರೀಮಿಂಗ್‌ ಅಥವಾ ಹೈಕೋರ್ಟ್‌ ಯೂಟ್ಯೂಬ್‌ ಚಾನಲ್‌ನಲ್ಲಿನ ವಿಡಿಯೊಗಳನ್ನು ರೆಕಾರ್ಡ್‌ ಮಾಡುವುದಾಗಲಿ, ಪ್ರಸರಣ ಮಾಡುವುದಕ್ಕೆ ನಿರ್ಬಂಧ ಹೇರಿದೆ.

ಪೂರ್ವಾನುಮತಿ ಪಡೆಯದೇ ಲೈವ್‌ ಸ್ಟ್ರೀಮಿಂಗ್‌ನ ಮರು ಪ್ರಸಾರ, ವರ್ಗಾವಣೆ, ಅಪ್‌ಲೋಡ್‌ ಮಾಡುವುದು, ಪೋಸ್ಟ್‌ ಮಾಡುವುದು, ಮಾರ್ಪಾಡು ಮಾಡುವುದು ಪ್ರಸಾರ ಅಥವಾ ಮರು ಪ್ರಸಾರವನ್ನು ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯದ ಕಲಾಪವನ್ನು ರೆಕಾರ್ಡ್‌ ಮಾಡಲು ಅಥವಾ ಅದರ ನಿರೂಪಣೆಗೆ ಯಾವುದೇ ವ್ಯಕ್ತಿಗೆ ಅನುಮತಿ ನೀಡಲಾಗಿಲ್ಲ. ನ್ಯಾಯಾಲಯದ ನಿಯಮ ಉಲ್ಲಂಘಿಸಿದ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಾನೂನಿನಡಿ ಕ್ರಮಕೈಗೊಳ್ಳಲಾಗುತ್ತದೆ. ನ್ಯಾಯಾಲಯದ ಕಲಾಪದ ರೆಕಾರ್ಡಿಂಗ್‌ ಮತ್ತು ಆರ್ಕೈವ್‌ ದತ್ತಾಂಶದ ಮೇಲೆ ನ್ಯಾಯಾಲಯಕ್ಕೆ ವಿಶೇಷ ಹಕ್ಕುಸ್ವಾಮ್ಯವಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಈ ಸಂಬಂಧದ ನೋಟಿಸ್‌ ಅನ್ನು ಪ್ರತಿಯೊಂದು ಕೋರ್ಟ್‌ ಹಾಲ್‌ಗಳ ವೀಡಿಯೊ ಕಾನ್ಫರೆನ್ಸ್‌ ಪರದೆಯ ಮೇಲೆ ಕಲಾಪ ಆರಂಭಕ್ಕೂ ಮುನ್ನ ಮತ್ತು ಮಧ್ಯಾಹ್ನ ಭೋಜನದ ವೇಳೆಯಲ್ಲಿ ಪ್ರಸಾರ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT