ಬೆಳಗಾವಿ: ಶಾಸಕ ರಾಜು ಕಾಗೆ ಸಹೋದರನ ಪುತ್ರ ಚಲಾಯಿಸುತ್ತಿದ್ದ ಕಾರು ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಹೊರವಲಯದ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಗೋಕಾಕ್ ಮೂಲದ ಬಸವರಾಜ ಪುಡಕಲಕಟ್ಟಿ (22) ಎಂದು ಗುರುತಿಸಲಾಗಿದೆ. ಮೃತ ಬಸವರಾಜ ಹಾಗೂ ಆತನ ಇಬ್ಬರು ಸ್ನೇಹಿತರು ಬೆಳಗಾವಿಯಿಂದ ಕಿತ್ತೂರಿಗೆ ಬೈಕ್‌ನಲ್ಲಿ ಕೆಲಸಕ್ಕೆ ಹೊರಟ್ಟಿದ್ದರು.
ಈ ವೇಳೆ ಶಾಸಕ ರಾಜು ಕಾಗೆ ಸಹೋದರನ ಪುತ್ರ ಶ್ರೀಪ್ರಸಾದ್ ಸಿದ್ದನಗೌಡ ಕಾಗೆ ಪ್ರಯಾಣಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸವರಾಜ ಪುಡಕಲಕಟ್ಟಿ ಸಾವನ್ನಪ್ಪಿದ್ದು, ಸಣ್ಣವಿಠ್ಠಲ್ ದುರದುಂಡಿ, ನಿಂಗಪ್ಪ ಹೆಬ್ಬಾಳ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ದೇಹವನ್ನು ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಗಾಯಾಳುಗಳನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.