ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳ ತೆಗೆದುಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಗುರುವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಿಂದ ಉಂಟಾಗುವ ಸಮಸ್ಯೆ ತಪ್ಪಿಸುವ ಸಂಬಂಧ ಅಧಿಕಾರಿಗಳೊಂದಿಗೆ ತುಷಾರ್ ಗಿರಿನಾಥ್ ಅವರು ಸಭೆ ನಡೆಸಿದರು.
ಈ ವೇಳೆ ಸಾಯಿ ಲೇಔಟ್, ಪೈ ಲೇಔಟ್, ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್, ಕೋಗಿಲು ಕ್ರಾಸ್, ಸರ್ಜಾಪುರ ರಸ್ತೆ (ಇಬ್ಲೂರು ಜಂಕ್ಷನ್), ಅಬ್ಬಿಗೆರೆ ಕೆರೆ ಕೋಡಿ, ಮೈಸೂರು ರಸ್ತೆ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ಇತರ ಸ್ಥಳಗಳಲ್ಲಿ ಮಳೆಗಾಲ ಪ್ರಾರಂಭವಾಗುವ ಮೊದಲು ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಈ ವೇಳೆ ನಗರದಲ್ಲಿ 11 ಹೊರ ಪ್ರವಾಹ ಪೀಡಿತ ಸ್ಥಳಗಳು ಸೇರಿದಂತೆ ಒಟ್ಟು 209 ಸ್ಥಳಗಳ ಪೈಕಿ ಈಗಾಗಲೇ 166 ಸ್ಥಳದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ರಾಜಕಾಲುವೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.
ಉಳಿದ 43 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರವಾಹ ಪೀಡಿತ ಪ್ರದೇಶಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜಕಾಲುವೆಯಲ್ಲಿ ಹೂಳು ತೆರವುಗೊಳಿಸಲು ಸೂಚಿಸಲಾಗಿ ದೆ. ರಸ್ತೆಯಲ್ಲಿ 180 ಕಡೆ ನೀರು ನಿಲ್ಲುವ ಸ್ಥಳಗಳನ್ನು ಸಂಚಾರಿ ಪೊಲೀಸ್ ವಿಭಾಗ ಗುರುತಿಸಿದ್ದು, ಈ ಪೈಕಿ ಸಂಬಂಧಪಟ್ಟ ಎಂಜಿನಿಯರ್, ಸಂಚಾರಿ ಪೊಲೀಸ್ ವಿಭಾಗ ನೀಡಿರುವ ಪಟ್ಟಿ ಅನುಸಾರ ಸ್ಥಳ ಪರಿಶೀಲನೆ ನಡೆಸಿ ನೀರು ನಿಲ್ಲದಂತೆ ಸೂಕ್ತ ಕ್ರಮ ವಹಿಸಬೇಕು. ಜೊತೆಗೆ ರಸ್ತೆ ಬದಿ ಅಳವಡಿಸಿರುವ ಗ್ರೇಟಿಂಗ್ಸ್‌ಗಳ ಬಳಿ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ಸೈಡ್‌ಡೆನ್ ಗಳಿಗೆ ಸರಾಗವಾಗಿ ಮಳೆ ನೀರು ಹರಿದು ಹೋಗುವಂತೆ ನೋಡಿಕೊಳ್ಳಲು ಸೂಚಿಸಿದರು.