ಬೆಳಗಾವಿ: ಪರಪುರುಷನ ಜೊತೆ ಸರಸ ಸಲ್ಲಾಪಕ್ಕಾಗಿ ಮದುವೆಯಾಗಿದ್ದ ಗಂಡನನ್ನೇ ಪತ್ನಿಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಬಳಿ ನಡೆದಿದೆ.
ಏಪ್ರಿಲ್ 2ರಂದು ವ್ಯಕ್ತಿಯೋರ್ವನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ಶುರು ಮಾಡಿದ್ದ ಪೊಲೀಸರಿಗೆ ಮೃತಪಟ್ಟ ವ್ಯಕ್ತಿ 43 ವರ್ಷದ ಶಿವನಗೌಡ ಪಾಟೀಲ್ ಎಂಬ ವಿಚಾರ ತಿಳಿದುಬಂದಿದೆ. ನಂತರ ತನಿಖೆ ಚುರುಕುಗೊಳಿಸುತ್ತಿದ್ದಂತೆ ಮೃತ ವ್ಯಕ್ತಿಯ ಪತ್ನಿ ಶೈಲಾ ಸುಪಾರಿ ಕೊಟ್ಟು ಗಂಡನನ್ನು ಹತ್ಯೆ ಮಾಡಿರುವ ವಿಚಾರ ಬಹಿರಂಗಗೊಂಡಿದೆ.
ರುದ್ರಪ್ಪ ಹೊಸೆಟ್ಟಿ ಎಂಬುವನ ಜೊತೆ ಶೈಲಾ ಎರಡು ವರ್ಷಗಳಿಂದ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ತಿಳಿದು ಶಿವನಗೌಡ ಪಾಟೀಲ್ ಆತನ ಸಹವಾಸ ಬಿಟ್ಟುಬಿಡುವಂತೆ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಶೈಲಾ ಶಿವನಗೌಡನ ಕಥೆ ಮುಗಿಸಲು ಪ್ರಿಯಕರಿಗೆ ತಿಳಿಸಿದ್ದಾಳೆ. ನಂತರ ಇಬ್ಬರು ಸೇರಿ ಯೋಜನೆಯೊಂದನ್ನು ರೂಪಿಸಿ ಅದರಂತೆ ಶಿವನಗೌಡ ಪತ್ನಿಯನ್ನು ತವರು ಮನೆಗೆ ಬಿಟ್ಟು ಬರುವ ಹಾದಿಯಲ್ಲಿ ಹೊಂಚು ಹಾಕಿ ಕುಳಿತಿದ್ದ ರುದ್ರಪ್ಪ ಹೊಸೆಟ್ಟಿ ಶಿವನಗೌಡನ ಜೊತೆ ಪಾರ್ಟಿ ಮಾಡಿದ್ದಾನೆ. ಚೆನ್ನಾಗಿ ಕುಡಿಸಿ ಶಿವನಗೌಡನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದನು. ಈ ದೃಶ್ಯವನ್ನು ವಾಟ್ಸಪ್ ಕಾಲ್ನಲ್ಲಿ ಶೈಲಾ ಲೈವ್ ನೋಡಿದ್ದಾಳೆ. ಬಳಿಕ ತನಗೆ ಏನು ಗೊತ್ತಿಲ್ಲವೆಂದು ಗಂಡನ ಮೃತದೇಹದ ಮೇಲೆ ಬಿದ್ದು ಗೋಳಾಡಿದ್ದಳು.
ಇನ್ನು ಪೊಲೀಸರು ತನಿಖೆಯ ಭಾಗವಾಗಿ ಶೈಲಾಳ ಫೋನ್ ಪರಿಶೀಲನೆ ಮಾಡಿದಾಗ ಆಕೆಯ ಕಳ್ಳಾಟಗಳು ಬಯಲಾಗಿದೆ. ಬಳಿಕ ಪೊಲೀಸರು ಶೈಲಾಳನ್ನು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಲಾದ ಕೊಲೆ ವಿಚಾರವನ್ನು ತಿಳಿಸಿದ್ದಾಳೆ. ಕೊಲೆ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.