ಬೆಂಗಳೂರು: ವಿಜಯಪುರದಲ್ಲೇ ಫೈವ್ ಸ್ಟಾರ್ ಹೋಟೆಲ್ ಇಲ್ಲ, ಹೊನವಾಡ ಗ್ರಾಮದಲ್ಲಿ ಫೈವ್ ಸ್ಟಾರ್ ಹೋಟೆಲ್ ನಿರ್ಮಿಸಲು ಸಾಧ್ಯನಾ? ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ತಪ್ಪು ಗ್ರಹಿಕೆ ಆಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಅವರು ಶನಿವಾರ ಹೇಳಿದರು.
ತಿದ್ದುಪಡಿ ಮಸೂದೆ ಅಂಗೀಕಾರ-ಸಂಸದ ಓವೈಸಿ ಸುಪ್ರೀಂ ಕೋರ್ಟ್ ಗೆ ಮೊರೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ವಿಜಯಪುರದ ಹೊನವಾಡ ಗ್ರಾಮದ್ದು ಪ್ರಸ್ತಾಪಿಸಿದ್ದಾರೆ. ತೇಜಸ್ವಿ ಸೂರ್ಯ ಕೂಡಾ ಪ್ರಸ್ತಾಪಿಸಿದ್ದಾರೆ. ಹೊನವಾಡ ಗ್ರಾಮದಲ್ಲಿ ಜಮೀನು ವಕ್ಫ್ ಗೆ ತೆಗೆದುಕೊಂಡು ಫೈವ್ ಸ್ಟಾರ್ ಹೋಟೆಲ್ ನಿರ್ಮಾಣ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ವಿಜಯಪುರದಲ್ಲೇ ಫೈವ್ ಸ್ಟಾರ್ ಹೋಟೆಲ್ ಇಲ್ಲ, ಹೊನವಾಡ ಗ್ರಾಮದಲ್ಲಿ ಫೈವ್ ಸ್ಟಾರ್ ಹೋಟೆಲ್ ನಿರ್ಮಿಸಲು ಸಾಧ್ಯನಾ? ಅಮಿತ್ ಶಾ ಅವರಿಗೆ ತಪ್ಪು ಗ್ರಹಿಕೆ ಆಗಿದೆ ಎಂದು ಹೇಳಿದರು.
ಅಮಿತ್ ಶಾ ಉಲ್ಲೇಖಿಸಿದ ಪ್ರದೇಶವನ್ನು ಹೊನವಾಡ ಗ್ರಾಮದ ಭಾಗವೆಂದು ತಪ್ಪಾಗಿ ಗುರುತಿಸಲಾಗಿದೆ. ಜಿಲ್ಲೆಯಲ್ಲಿ 12 ಸಾವಿರ ಎಕರೆ ವಕ್ಫ್ ಭೂಮಿಯನ್ನು ಸಾಂಸ್ಥಿಕೀಕರಣಗೊಳಿಸಲಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಲಿದರು.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕುರಿತಂತೆಯೂ ಕಿಡಿಕಾರಿದ ಅವರು, ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು.
ಏತನ್ಮಧ್ಯೆ, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ವಕ್ಫ್ ಕಾಯ್ದೆಗೆ ತಿದ್ದುಪಡಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ನ್ಯಾಯಯುತ ತೀರ್ಪು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆ ಸೇರಿದಂತೆ ಬಿಜೆಪಿಯ ಆಂತರಿಕ ವಿಚಾರಗಳ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ಯತ್ನಾಳ್ ಬೆಂಬಲಿಗರು ಬೃಹತ್ ರ‍್ಯಾಲಿ ನಡೆಸಲು ನಿರ್ಧರಿಸಿದ್ದಾರೆ. ಆದರೆ, ಈ ವಿಷಯ ಕಾಂಗ್ರೆಸ್‌ಗೆ ಸಂಬಂಧಿಸಿಲ್ಲ ಎಂದರು.
ಯತ್ನಾಳ್ ಅವರು ಹೊಸ ರಾಜಕೀಯ ಪಕ್ಷ ಕಟ್ಟುತ್ತಿದ್ದಾರೆಂಬ ಸುದ್ದಿ ಕುರಿತು ಪ್ರತಿಕ್ರಿಯಿಸಿ, ಅವರು ಹೊಸ ಪಕ್ಷವನ್ನು ರಚಿಸಲಿ ಮತ್ತು ಎಲ್ಲಾ 224 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿ. ಅವರ ಪ್ರಯತ್ನಕ್ಕೆ ಶುಭಾಶಯಗಳನ್ನು ತಿಳಿಸುತ್ತೇನೆಂದು ಹೇಳಿದರು.
ಮುಂದಿನ ಕೆಪಿಸಿಸಿ ಅಧ್ಯಕ್ಷರ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿ, ಈಶ್ವರ ಖಂಡ್ರೆ ಮತ್ತು ಸತೀಶ್ ಜಾರಕಿಹೊಳಿ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಅಂತಿಮ ನಿರ್ಧಾರ ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಹೇಳಿದರು.
ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಶಾಸಕ ಪೊನ್ನಣ್ಣ ಅವರಿಗೆ ಬೆಂಬಲ ವ್ಯಕ್ಯಪಡಿಸಿದರು.