ಬೆಂಗಳೂರು: 26 ಎಕರೆ ವಿಸ್ತೀರ್ಣದ ಚೂಡಸಂದ್ರ ಕೆರೆ ಪುನರುಜ್ಜೀವನ ಕಂಡಿದೆ, ಕೆರೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು 84 ಮಿಲಿಯನ್ ಲೀಟರ್‌ಗಳಿಂದ 150 ಮಿಲಿಯನ್‌ಗೆ ಹೆಚ್ಚಿಸಲಾಗಿದ್ದು, ನೀರಿನ ಗುಣಮಟ್ಟ ಮತ್ತು ಜೀವವೈವಿಧ್ಯತೆಯನ್ನು ಸುಧಾರಿಸಲಾಗಿದೆ. ಇದರಿಂದ 3,000 ಮನೆಗಳಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.
ಬಾಷ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್ (ಬಿಜಿಎಸ್‌ಡಬ್ಲ್ಯೂ) ಮತ್ತು ಎನ್‌ಜಿಒ ಸೇಟ್ರೀಸ್‌ನ ಸಿಎಸ್‌ಆರ್ (ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ) ಉಪಕ್ರಮದ ಅಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕೆರೆಯನ್ನು ಪುನಶ್ಚೇತನಗೊಳಿಸಲಾಗಿದೆ.
ಕೆರೆ ಪುನಶ್ಚೇತನ ಸಂಬಂಧ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಕೆರೆ ಭೂಮಿ ಅತಿಕ್ರಮ ಹಾಗೂ ಕಳೆಗಳನ್ನು ತೆರವುಗೊಳಿಸಲಾಗಿದ್ದು, ಒಳಚರಂಡಿ ನೀರು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳಲಾಗಿದೆ. ಜೌಗು ಪ್ರದೇಶವನ್ನು ಸೃಷ್ಟಿಸಲಾಗಿದ್ದು, ನಿಂಫಿಯಾ ಮತ್ತು ಕೊಲೊಕಾಸಿಯಾದಂತಹ ಸ್ಥಳೀಯ ಸಸ್ಯಗಳನ್ನು ನೆಡಾಗಿದೆ. ಕೆರೆಯ ಜೀವವೈದ್ಯತೆಯನ್ನು ಪುನರುಜ್ಜೀವನಗೊಳಿಸಲು ಹೂಳು ತೆಗೆಯಲಾಗಿದ್ದು, ಕಲ್ಯಾಣಿಯನ್ನೂ ಕೂಡ ನಿರ್ಮಿಸಲಾಗಿದೆ ಎಂದು ತಿಳಿಸಲಾಗಿದೆ.
ಕೆರೆಗೆ ಪಕ್ಷಿ ಪ್ರಬೇಧಗಳು ಮರಳಿದ್ದು, ಇದು ಪರಿಸರ ಚೇತರಿಕೆಯ ಸೂಚನೆಯಾಗಿದೆ. ಇದು ಕೆರೆ ಪುನಶ್ಚೇತನ ಕಾರ್ಯ ಯಶಸ್ವಿಯಾಗಿರುವುದನ್ನು ಸೂಚಿಸುತ್ತಿದೆ ಎಂದು ಚೂಡಸಂದ್ರ ಕೆರೆ ಪುನಃಸ್ಥಾಪನೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ತಂಡದ ಪರಿಸರಶಾಸ್ತ್ರಜ್ಞ ಡಾ. ರಾಜಕಮಲ್ ಗೋಸ್ವಾಮಿ ಅವರು ಹೇಳಿದ್ದಾರೆ.
ಸೇಟ್ರೀ ಸಂಸ್ಥಾಪಕ ಕಪಿಲ್ ಶರ್ಮಾ ಅವರು ಮಾತನಾಡಿ, ಇದು ಇತರ ನಗರ ಜಲಮೂಲ ಪುನಃಸ್ಥಾಪನೆ ಯೋಜನೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.