ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ 
ರಾಜ್ಯ

'ಒಳ ಮೀಸಲಾತಿ' ಹೋರಾಟದಲ್ಲಿ ಒಗಟ್ಟು ಅತ್ಯಗತ್ಯ: ಸಚಿವ ಮುನಿಯಪ್ಪ

ಪರಿಶಿಷ್ಟ ಜಾತಿ ಹಾಗೂ ಇತರೆ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಆದರೂ ನಮ್ಮ ಸಮುದಾಯದ ಎಲ್ಲಾ ಮುಖಂಡರು ಒಂದಾಗುವವರೆಗೂ ನಮಗೆ ಸಿಗಬೇಕಾದ ನ್ಯಾಯ ಸಿಗುವುದಿಲ್ಲ.

ಹೊಸಪೇಟೆ: ಒಳ ಮೀಸಲಾತಿಯಡಿಯಲ್ಲಿ ಪರಿಶಿಷ್ಟ ಜಾತಿಯ ಎಡ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಲು ಎಲ್ಲಾ ರಾಜಕೀಯ ನಾಯಕರ ಒಗ್ಗಟ್ಟು ಅತ್ಯಗತ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಭಾನುವಾರ ಹೇಳಿದರು.

ಹೊಸಪೇಟೆಯ ಎ.ಆರ್.ಎಸ್ ಹೋಮ್ ಸ್ಟೇ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಾದಾರಚನ್ನಯ್ಯ ಸೇವಾ ಸಮಿತಿಯ ದ್ವಿತೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಹಾಗೂ ಇತರೆ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಆದರೂ ನಮ್ಮ ಸಮುದಾಯದ ಎಲ್ಲಾ ಮುಖಂಡರು ಒಂದಾಗುವವರೆಗೂ ನಮಗೆ ಸಿಗಬೇಕಾದ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು.

ನಮ್ಮ ಸಮುದಾಯದ ನ್ಯಾಯಯುತ ಬೇಡಿಕೆಗಳ ಪರವಾಗಿ ನಾನು 1991 ರಿಂದ 7 ಬಾರಿ ಸಂಸದನಾಗಿ ಪ್ರಯತ್ನ ಪಟ್ಟಿದ್ದೇನೆ. ಪ್ರಧಾನಮಂತ್ರಿಗಳಾಗಿದ್ದ ಪಿವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಡಾ.ಮನಮೋಹನ್ ಸಿಂಗ್ ರವರಿಗೆ ನಮ್ಮ ಸಮುದಾಯದ ಎಲ್ಲಾ ಸಂಸದರೂ ಒಟ್ಟಾಗಿ ನಿಯೋಗವು ಹೋಗಿ ಮನವಿ ಮಾಡಿದ್ದರೂ ಇಲ್ಲಿಯವರೆಗೂ ನ್ಯಾಯಯುತವಾಗಿ ನಮಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಾನಮಾನಗಳು ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯಾವುದೇ ಪಕ್ಷವಿರಲಿ ನಾವು ಒಟ್ಟಾಗಿ ಹೋಗಬೇಕು. ಅಂದು ಕೇಂದ್ರದಲ್ಲಿ ನಮ್ಮ ಯುಪಿಎ ಸರಕಾರವಿದ್ದಾಗ ಆಂಧ್ರಪ್ರದೇಶದಲ್ಲಿ ಮೀಸಲಾತಿ ವರ್ಗೀಕರಣ ಮಾಡಲು ಉಷಾ ಮೆಹರಾ ಆಯೋಗ ರಚಿಸಿದಾಗ ಅದು ಮಾಲ, ಮಾದಿಗ, ಆದಿ ಆಂಧ್ರ ಎಷ್ಟು ಜನಸಂಖ್ಯೆ ಇದೆ ಎಂದು ಮಾಹಿತಿ ಸಂಗ್ರಹಿಸಿತು. ಇದರ ಆಧಾರದ ಮೇಲೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೂ ಮೀಸಲಾತಿ ವರ್ಗೀಕರಣವನ್ನು ವಿಸ್ತರಿಸಲು ನಿರ್ಧರಿಸಿದೆವು. ಆದರೆ ಅದನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ಒಳಮೀಸಲಾತಿ ಜಾರಿ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿ ಬಹುನಿರೀಕ್ಷಿತ ನ್ಯಾಯ ದೊರಕಿಸಿಕೊಟ್ಟಿರುವುದು ಮಹತ್ವದ ತಿರುವಾಗಿದೆ.

ತೀರ್ಪು ಜಾರಿಯಾದ ಕೂಡಲೇ ನಾನು ಅಬಕಾರಿ ಸಚಿವ ತಿಮ್ಮಾಪುರ್ ಮತ್ತು ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚಿಸಿ ಅನುಷ್ಠಾನಕ್ಕೆ ಒತ್ತಾಯಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ಕೂಡ ಮೀಸಲಾತಿಯನ್ನು ವಿಳಂಬ ಮಾಡದೆ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಮಾನತೆ ಸಾಧಿಸಲು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. 40 ದಿನಗಳೊಳಗೆ ನಿಖರ ಮಾಹಿತಿ ಸಂಗ್ರಹಿಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರನ್ನೊಳಗೊಂಡ ಏಕಸದಸ್ಯ ಆಯೋಗವನ್ನು ರಚಿಸಲಾಗಿದ್ದು, ಅದರ ಆಧಾರದ ಮೇಲೆ ಜನಸಂಖ್ಯೆ ಮತ್ತು ಆರ್ಥಿಕ ಮಾನದಂಡಗಳ ಪ್ರಕಾರ ಒಳಮೀಸಲಾತಿ ಜಾರಿಯಾಗಲಿದೆ.

ಇದಲ್ಲದೆ, ಆಯೋಗವು ಸಂಗ್ರಹಿಸಿದ ವಿವರವಾದ ಮಾಹಿತಿಯ ಆಧಾರದ ಮೇಲೆ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಲಾಗುವುದು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಈ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಈ ಸಮುದಾಯದ ಜನಸಂಖ್ಯೆಯ ಅನುಗುಣವಾಗಿ ಮತ್ತು ಆರ್ಥಿಕ ಸ್ಥಿತಿಗಳನ್ನು ಅವಲೋಕನ ಮಾಡಿ ನಿರ್ದಿಷ್ಟವಾದ ಮಾಹಿತಿಗಳೊಂದಿಗೆ ನಮಗೆ ನ್ಯಾಯ ಒದಗಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರಕಾರದ ಎಲ್ಲ ಸಚಿವರು ಈ ಒಳ ಮೀಸಲಾತಿ ಅನುಷ್ಠಾನಕ್ಕೆ ಬೆಂಬಲವಾಗಿದ್ದಾರೆ. ಆದುದರಿಂದ, ನಾವು ನಮ್ಮ ಸೋದರ ಸಮುದಾಯಗಳ ಸಚಿವರಿಗೆ ಧನ್ಯವಾದಗಳನ್ನು ತಿಳಿಸಬೇಕು. ಈಗಾಗಲೇ ತೆಲಂಗಾಣ ರಾಜ್ಯ ಒಳ ಮೀಸಲಾತಿ ಅನುಷ್ಠಾನ ಮಾಡಿದ್ದು ಆಂಧ್ರ್ರಪ್ರದೇಶ, ಹರಿಯಾಣ ರಾಜ್ಯಗಳು ಅನುಷ್ಠಾನಕ್ಕೆ ಮುಂದಾಗಿವೆ. ನಮ್ಮ ರಾಜ್ಯದಲ್ಲಿಯೂ ಮುಂದಿನ 40 ದಿನಗಳಲ್ಲಿ ಸೂಕ್ತ ಅಂಕಿ ಆಂಶಗಳನ್ನು ಸಂಗ್ರಹಿಸಿ ಅನುಷ್ಠಾನ ಮಾಡಲಿದ್ದೇವೆ. ಈ ಬಗ್ಗೆ ಯಾರಿಗೂ ಸಂಶಯಬೇಡ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT