ಮಂಗಳೂರು: 2022ರಲ್ಲಿ ನಡೆದಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಾಫಿ ಬೆಳ್ಳಾರೆ ಹಣೆಗೆ ಅಪರಿಚಿತ ಯುವಕನೋರ್ವ ಮುತ್ತಿಟ್ಟಿರುವ ಘಟನೆ ಸೋಮವಾರ ನಡೆದಿದೆ.
ಶಾಫಿ ಬೆಳ್ಳಾರೆಯನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಈ ಘಟನೆ ನಡೆದಿದೆ. ಇಬ್ಬರು ಪೊಲೀಸರು ಬೆಂಗಾವಲಾಗಿ ನಿಂತಿದ್ದರೂ ಯುವಕ ಬೆಳ್ಳಾರೆಯ ತಲೆಯನ್ನು ಎರಡೂ ಕೈಗಳಿಂದ ಹಿಡಿದು ಹಣೆಗೆ ಮುತ್ತಿಡುವಲ್ಲಿ ಯಶಸ್ವಿಯಾಗಿದ್ದಾನೆ.
ನ್ಯಾಯಾಲಯದ ಆವರಣದಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಬಹಿರಂಗವಾಗಿಯೇ ಈ ಘಟನೆ ನಡೆದಿದೆ.
ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಬೆಳ್ಳಾರೆಯನ್ನು 2017 ರಲ್ಲಿ ಆರ್‌ಎಸ್‌ಎಸ್ ಮತ್ತು ಕಲ್ಲಡ್ಕ ಭಟ್ ವಿರುದ್ಧ ಮಾಡಿದ್ದ ಅವಹೇಳನಾಕಾರಿ ಭಾಷಣ ಸಂಬಂಧದ ಪ್ರತ್ಯೇಕ ಕೇಸ್ ಗಳಲ್ಲಿ ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು.
ಬೆಳ್ಳಾರೆಗೆ ಕಿಸ್ ಮಾಡಿದ ತಕ್ಷಣ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಗುರುತಿಸಿ ಬಂಧಿಸಲು ಶೋಧ ಕಾರ್ಯ ನಡೆಯುತ್ತಿದೆ.