ಸಾಂದರ್ಭಿಕ ಚಿತ್ರ  
ರಾಜ್ಯ

Karnataka PUC 2 Result 2025: ದ್ವಿತೀಯ ಪಿಯುಸಿ ರಿಸಲ್ಟ್; ಶೇ.73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಫಲಿತಾಂಶದಲ್ಲಿ ಶೇ.7.7ರಷ್ಟು ಕುಸಿತ

ಈ ವರ್ಷ ಪರೀಕ್ಷೆಗೆ ಹಾಜರಾದ 6,37,805 ವಿದ್ಯಾರ್ಥಿಗಳಲ್ಲಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ದ್ವಿತೀಯ ಪಿಯುಸಿ ಪರೀಕ್ಷೆ -1 ರ ಫಲಿತಾಂಶಗಳನ್ನು ಮಂಗಳವಾರ ಪ್ರಕಟಿಸಿದ್ದು, ರಾಜ್ಯದಲ್ಲಿ ಒಟ್ಟಾರೆ ಶೇಕಡಾವಾರು 73.45 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಕಳೆದ ವರ್ಷದ ಶೇಕಡಾ 81.15ಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಶೇ. 7.7 ರಷ್ಟು ಕುಸಿತ ಕಂಡಿದೆ.

ಈ ವರ್ಷ ಪರೀಕ್ಷೆಗೆ ಹಾಜರಾದ 6,37,805 ವಿದ್ಯಾರ್ಥಿಗಳಲ್ಲಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಯುತ್ತಮ ಸ್ಥಾನ ಗಳಿಸಿದ್ದು, ಮತ್ತೊಮ್ಮೆ, ಹುಡುಗಿಯರೇ ಮೂರು ವಿಭಾಗಗಳಲ್ಲಿಯೂ ಹುಡುಗರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು karresults.nic.in ಅಥವಾ kseab.karnataka.gov.in ನಲ್ಲಿ ಪರಿಶೀಲಿಸಬಹುದು.

ಹೆಣ್ಣುಮಕ್ಳೇ ಸ್ಟ್ರಾಂಗ್!

ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮೂರೂ ವಿಭಾಗಗಳಲ್ಲಿಯೂ ಹುಡುಗಿಯರು ಹುಡುಗರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಈ ವರ್ಷ ಅತಿ ಹೆಚ್ಚು ಅಂಕ ಗಳಿಸಿದವರು ಎಲ್ಲರೂ ವಿದ್ಯಾರ್ಥಿನಿಯರೇ - ಬಳ್ಳಾರಿಯ ಎಲ್.ಆರ್. ಸಂಜನಾ ಬಾಯಿ 597 ಅಂಕಗಳೊಂದಿಗೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ, ದಕ್ಷಿಣ ಕನ್ನಡದ ದೀಪಶ್ರೀ ಎಸ್ 599 ಅಂಕಗಳೊಂದಿಗೆ ವಾಣಿಜ್ಯ ವಿಭಾಗದಲ್ಲಿ ಮತ್ತು ದಕ್ಷಿಣ ಕನ್ನಡದವರೇ ಆದ ಅಮೂಲ್ಯ ಕಾಮತ್ ವಿಜ್ಞಾನ ವಿಭಾಗದಲ್ಲಿ 599 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಉಡುಪಿ ಜಿಲ್ಲೆ 93.90% ರಷ್ಟು ಅತಿ ಹೆಚ್ಚು ಉತ್ತೀರ್ಣರಾಗಿದ್ದರೆ, ದಕ್ಷಿಣ ಕನ್ನಡ 93.57% ರಷ್ಟು ಉತ್ತೀರ್ಣರಾಗಿದ್ದು, ಯಾದಗಿರಿ 48.45% ರಷ್ಟು ಕೊನೆಯ ಸ್ಥಾನದಲ್ಲಿದೆ.

ಕನ್ನಡ ಮಾಧ್ಯಮದಲ್ಲಿ 2,08,794 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,17,703 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ - ಶೇ. 56.37% ರಷ್ಟು ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ 4,29,011 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3,50,736 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಶೇಕಡಾ 81.75ರಷ್ಟು ಫಲಿತಾಂಶ ಬಂದಿದೆ.

ಮರು ಮೌಲ್ಯಮಾಪನ ಮತ್ತು ಮರು ಎಣಿಕೆ

ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶಗಳನ್ನು ಆಯಾ ಕಾಲೇಜುಗಳಿಗೆ ಕೆಎಸ್‌ಇಎಬಿ ಪಿಯು ಪರೀಕ್ಷಾ ಪೋರ್ಟಲ್ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಏಪ್ರಿಲ್ 8 ರಿಂದ ಏಪ್ರಿಲ್ 13 ರವರೆಗೆ ಅರ್ಜಿ ಸಲ್ಲಿಸಬಹುದು. ಈ ಪ್ರತಿಗಳನ್ನು ಏಪ್ರಿಲ್ 12 ರಿಂದ ಏಪ್ರಿಲ್ 16, 2025 ರ ನಡುವೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮರುಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸುವ ಸಮಯ ಏಪ್ರಿಲ್ 12 ರಿಂದ ಏಪ್ರಿಲ್ 17 ರವರೆಗೆ ತೆರೆದಿರುತ್ತದೆ,

ಸ್ಕ್ಯಾನ್ ಮಾಡಿದ ಪ್ರತಿಯನ್ನು ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1,670 ರೂ ಪಾವತಿಸಬೇಕು. ಮರು ಎಣಿಕೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಪರೀಕ್ಷೆ-2 ಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಫಲಿತಾಂಶಗಳಿಗಾಗಿ ಕಾಯಬೇಕಾಗಿಲ್ಲ. ಪರೀಕ್ಷೆ-1 ಕ್ಕೆ ಮರು ಮೌಲ್ಯಮಾಪನ ಅಂಕಗಳನ್ನು ಅಂತಿಮವೆಂದು ಪರಿಗಣಿಸಲಾಗುತ್ತದೆ ಮತ್ತು ಮರು ಮೌಲ್ಯಮಾಪನ ಸಮಿತಿಯ ನಿರ್ಧಾರವು ಬದ್ಧವಾಗಿರುತ್ತದೆ, ಮರು ಮೌಲ್ಯಮಾಪನ ಮತ್ತು ಮರು ಎಣಿಕೆ ಫಲಿತಾಂಶಗಳನ್ನು KSEAB ವೆಬ್‌ಸೈಟ್‌ https://kseab.karnataka.gov.in ನಲ್ಲಿ ಘೋಷಿಸಲಾಗುತ್ತದೆ.

II PU ಪರೀಕ್ಷೆ-2 ರ ನೋಂದಣಿ ಪ್ರಾರಂಭ

ಕಾಲೇಜುಗಳು ಏಪ್ರಿಲ್ 8 ರಿಂದ ಏಪ್ರಿಲ್ 15, 2025 ರವರೆಗೆ ಪರೀಕ್ಷೆ-2 ರ ಪುನರಾವರ್ತಕ, ಮತ್ತು ಮರು ಮೌಲ್ಯಮಾಪನ ಬಯಸುವ ವಿದ್ಯಾರ್ಥಿಗಳ ವಿವರಗಳನ್ನು ದಂಡವಿಲ್ಲದೆ ಅಪ್‌ಲೋಡ್ ಮಾಡಲು ಪ್ರಾರಂಭಿಸಬಹುದು. ಶುಲ್ಕ ಪಾವತಿ ಮತ್ತು ಅರ್ಜಿ ನಮೂನೆಗಳನ್ನು ದಂಡವಿಲ್ಲದೆ DDPU ಕಚೇರಿಗೆ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 16 ಆಗಿದೆ. ತಡವಾದ ಶುಲ್ಕದೊಂದಿಗೆ, ನೋಂದಣಿ ವಿಂಡೋ ಏಪ್ರಿಲ್ 16 ಮತ್ತು ಏಪ್ರಿಲ್ 17 ರವರೆಗೆ ತೆರೆದಿರುತ್ತದೆ, ಅಂತಿಮ ಸಲ್ಲಿಕೆ ದಿನಾಂಕ ಏಪ್ರಿಲ್ 19 ಆಗಿದೆ.

ವಿದ್ಯಾರ್ಥಿಗಳು ಇಂದಿನಿಂದ ಏಪ್ರಿಲ್ 17 ರ ನಡುವೆ ತಮ್ಮ ಕಾಲೇಜುಗಳಲ್ಲಿ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು. 2023 ರ ಅಥವಾ ನಂತರದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದವರು ತಮ್ಮ ಫಲಿತಾಂಶ ಆಧಾರದ ಮೇಲೆ ನೋಂದಾಯಿಸಿಕೊಳ್ಳಬಹುದು, 2022 ರಲ್ಲಿ ಅಥವಾ ಅದಕ್ಕಿಂತ ಮೊದಲು ಅನುತ್ತೀರ್ಣರಾದವರು ನೋಂದಣಿಗಾಗಿ KSEAB ಒದಗಿಸಿದ 'MCA' ಅಗತ್ಯವಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT