ಬೆಂಗಳೂರು: ಬೇಸಿಗೆ ಶುರುವಾಗಿದ್ದು, ರಾಜ್ಯಾದ್ಯಂತ ಕುಡಿಯುವ ನೀರಿನ ಪರೀಕ್ಷೆಗೆ ವಿಶೇಷ ಅಭಿಯಾನ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಕಲುಷಿತ ನೀರಿನಿಂದ ಹಲವು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೀರಿನ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.
ಇದರಂತೆ ಜಿಲ್ಲಾ ಪಂಚಾಯಿತಿಗಳ ಎಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ನೀರಿನ ಪರೀಕ್ಷೆ ನಡೆಸುವಂತೆ ಆದೇಶ ಹೊರಡಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಸುಮಾರು 6,000 ಗ್ರಾಮ ಪಂಚಾಯಿತಿಗಳಿದ್ದು, ಅಲ್ಲಿನ ಸಿಬ್ಬಂದಿಗಳಿಗೆ ಈ ಪರೀಕ್ಷೆಗಳ ಕುರಿತು ತರಬೇತಿ ನೀಡಲಾಗಿದೆ. 12 ನಿಯತಾಂಕಗಳಂತೆ ನೀರಿನ ಗುಣಮಟ್ಟವನ್ನು ಪರಿಶೀಲನೆ ನಡೆಸಲಿದ್ದಾರೆ. ಹೈಡ್ರೋಜನ್ (PH), ಕ್ಲೋರೈಡ್, ಫ್ಲೋರೈಡ್, ಐರನ್, ನೈಟ್ರೇಟ್, ಅಲ್ಕಲೈನಿಟಿ, ಕ್ಲೋರಿನಿ್ ಹಾಗೂ ಒಟ್ಟು ಕರಗಿದ ಘನವಸ್ತುಗಳ ಸಾಮರ್ಥ್ಯ. ಬ್ಯಾಕ್ಟೀರಿಯಾ ಹಾಗೂ ಹೈಡ್ರೋಜನ್ ಸಲ್ಫೈಡ್ ಪರೀಕ್ಷೆಯನ್ನೂ ಕೂಡ ನಡೆಸಲಾಗುತ್ತದೆ.
ಇವು ಸಾಮಾನ್ಯ ಪರೀಕ್ಷೆಗಳಾಗಿದ್ದು, ಯಾವುದೇ ಪರೀಕ್ಷೆಯ ವರದಿಯಲ್ಲಿ ಸಮಸ್ಯೆಗಳಿರುವುದು ಕಂಡು ಬಂದಿದ್ದೇ ಆದರೆ, ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಸಮಸ್ಯೆಗಳು ಕಂಡ ಬರದಿದ್ದರೆ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾಮಾನ್ಯವಾಗಿ, ಮಳೆಗಾಲದ ಮೊದಲು ಮತ್ತು ನಂತರ ವರ್ಷಕ್ಕೆ ಎರಡು ಬಾರಿ ನೀರನ್ನು ಪರೀಕ್ಷಿಸಲು ಸೂಚನೆಗಳನ್ನು ನೀಡಲಾಗುತ್ತದೆ. ಕೆಲ ಸಮಯದಲ್ಲಿ ಅಗತ್ಯವೆನಿಸಿದರೆ ನೀರಿನ ಪರೀಕ್ಷೆ ನಡೆಸಬಹುದು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್) ಅಂಜುಮ್ ಪರ್ವೇಜ್ ಅವರು ತಿಳಿಸಿದ್ದಾರೆ.
ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗಿರುತ್ತದೆ. ಹೀಗಾಗಿ ಮಾಲಿನ್ಯ ಸಮಸ್ಯೆಗಳು ಹೆಚ್ಚಾಗಿರುವುದಿಲ್ಲ. ಬೇಸಿಗೆ ವೇಳೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ. ಈ ವೇಳೆ ನೀರಿನ ಗುಣಮಟ್ಟವನ್ನು ಪರಿಶೀಲಿಸಬೇಕಾಗುತ್ತದೆ. ಕುಡಿಯುವ ನೀರು ನಮ್ಮ ಆದ್ಯತೆಯಾಗಿದ್ದು, ಪರಿಶೀಲನೆ ನಡೆಸುವುದು ಅಗತ್ಯವಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ನಿಯಮಿತವಾಗಿ ಕುಡಿಯುವ ನೀರಿನ ಪರೀಕ್ಷೆ ನಡೆಸುವುದು, ಸರಬರಾಜು ಪೈಪ್‌ಗಳಲ್ಲಿ ಯಾವುದೇ ಸೋರಿಕೆ ಇದೆಯೇ ಎಂಬುದನ್ನು ಪರಿಶೀಲಿಸುತ್ತಾರೆಂದು ಹೇಳಿದರು.