ಬೀದರ್: ಸುಮಾರು ಒಂದೂವರೆ ವರ್ಷದ ಹಿಂದೆ ಸ್ಥಗಿತಗೊಂಡಿದ್ದ ಬೀದರ್ - ಬೆಂಗಳೂರು ವಿಮಾನ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಮರು ಚಾಲನೆ ನೀಡಿದ್ದಾರೆ.
ಇಂದು ಸಂಜೆ ಬೀದರ್ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೇಕ್ ಕತ್ತರಿಸಿ, ಬೋರ್ಡಿಂಗ್ ಪಾಸ್ ನೀಡವ ಮೂಲಕ ಬೀದರ್ - ಬೆಂಗಳೂರು ವಿಮಾನ ಸೇವೆಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಬಿ. ಖಂಡ್ರೆ ಅವರು, "ಕೇಂದ್ರ ಸರ್ಕಾರ ಉಡಾನ್ ಸಬ್ಸಿಡಿ ನಿಲ್ಲಿಸಿತು. ಈ ಹಿಂದೆ ಡಬಲ್ ಎಂಜಿನ್ ಸರ್ಕಾರ ಇದ್ದರೂ ಏನೂ ಮಾಡಲಿಲ್ಲ. ನಮ್ಮ ಸರ್ಕಾರ ಸ್ಥಗಿತಗೊಂಡಿದ್ದ ಬೀದರ್- ಬೆಂಗಳೂರು ನಾಗರಿಕ ವಿಮಾನಯಾನ ಪುನಾರಂಭಿಸಿದೆ. ಇದಕ್ಕಾಗಿ ಕೆಕೆಆರ್ಡಿಬಿಯಿಂದ ಈ ವರ್ಷ 14 ಕೋಟಿ ರೂ. ಮೀಸಲಿಡಲಾಗಿದೆ" ಎಂದರು.
ನಾಳೆಯಿಂದ ಬೀದರ್ - ಬೆಂಗಳೂರು ನಡುವೆ ಸ್ಟಾರ್ ಏರ್‌ಲೈನ್ಸ್ ವಿಮಾನ ಹಾರಾಟ ನಡೆಸಲಿದೆ. ಒಂದು ತಿಂಗಳ ಹಿಂದಿನಿಂದಲೇ ಸ್ಟಾರ್ ಏರ್‌ಲೈನ್ಸ್ ಆನ್‌ಲೈನ್‌ನಲ್ಲಿ ವಿಮಾನದ ಟಿಕೆಟ್ ಬುಕ್ಕಿಂಗ್ ಕೂಡ ಆರಂಭಿಸಿತ್ತು.
ಸ್ಟಾರ್ ಏರ್‌ಲೈನ್ಸ್ ವಿಮಾನ ಪ್ರತಿ ದಿನ ಬೆಳಗ್ಗೆ 7.30ಕ್ಕೆ ಬೆಂಗಳೂರಿನಿಂದ ಬೀದರ್ ಕಡೆಗೆ ಸಂಚರಿಸಲಿದೆ. ಅದೇ ದಿನ ಬೆಳಗ್ಗೆ 9.10ಕ್ಕೆ ಬೀದರ್‌ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ. ವಿಮಾನದ ಟಿಕೆಟ್ ಬುಕ್ಕಿಂಗ್ ಆರಂಭಗೊಂಡು ವಿಮಾನ ಹಾರಾಟ ನಡೆಸುತ್ತಿರುವುದಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.