ಬೆಂಗಳೂರು: ಡೀಸೆಲ್ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘ ಕೊನೆಗೂ ಮುಷ್ಕರವನ್ನು ವಾಪಸ್ ತೆಗೆದುಕೊಂಡಿದೆ.
ಲಾರಿ ಮಾಲೀಕರ ಬೇಡಿಕೆ ಈಡೇರಿಸುವ ಸಂಬಂಧ ಇಂದು ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಬಹುತೇಕ ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಲಾರಿ ಮಾಲೀಕರು ಮುಷ್ಕರವನ್ನು ಹಿಂಪಡೆದಿದ್ದಾರೆ.
ಡೀಸೆಲೆ ಬೆಲೆ ಇಳಿಕೆ ಹಾಗೂ ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಗಳನ್ನು ತೆಗೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘ ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತಿತ್ತು.
ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರೆಡ್ಡಿ ಅವರೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿತ್ತು. ಆದರೆ ಇಂದು ರಾಮಲಿಂಗಾರೆಡ್ಡಿ ಅವರೊಂದಿಗೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ಲಾರಿ ಮುಷ್ಕರವನ್ನು ವಾಪಸ್ ಪಡೆಯುತ್ತಿರುವುದಾಗಿ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ಡೀಸೆಲ್ ಬೆಲೆ ಕಡಿಮೆ ಮಾಡಲು ಅಥವಾ ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಗಳನ್ನು ತೆಗೆಯಲು ಸರ್ಕಾರ ಒಪ್ಪಿಲ್ಲ. ಆದಾಗ್ಯೂ, ಕೆಲವೊಂದು ಇತರ ಕುಂದುಕೊರತೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಲಾಗಿದೆ. ಹೀಗಾಗಿ ಲಾರಿ ಮುಷ್ಕರವನ್ನು ಹಿಂಪಡೆದಿರುವುದಾಗಿ ತಿಳಿಸಿದರು.