ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದ ಬಸ್‌ಗಳ ಮೇಲಿನ ತಂಬಾಕು, ಸಿಗರೇಟು, ಮದ್ಯ ಉತ್ಪನ್ನಗಳ ಜಾಹೀರಾತುಗಳನ್ನು ಕೂಡಲೇ ಸಂಪೂರ್ಣ ತೆರವುಗೊಳಿಸುವಂತೆ ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ ನೀಡಿದೆ.
ಸಿಎಂ ಕಚೇರಿ ಸೂಚನೆ ಮೇರೆಗೆ ಕೆಎಸ್ ಆರ್ ಟಿಸಿ, ಸಂಬಂಧಪಟ್ಟ ಜಾಹೀರಾತು ಪರವಾನಗಿದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಜಾಹೀರಾತುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ.
ನಾಗರಿಕರೊಬ್ಬರು ಸಾಮಾಜಿಕ ಮಾಧ್ಯಮದ ಮೂಲಕ ಬಸ್ ಗಳಲ್ಲಿ ತಂಬಾಕು ಜಾಹೀರಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಏಪ್ರಿಲ್ 8 ರಂದು ಮುಖ್ಯಮಂತ್ರಿಗೆ ವಿಶೇಷ ಕರ್ತವ್ಯ ಅಧಿಕಾರಿಯನ್ನು ಟ್ಯಾಗ್ ಮಾಡಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಸಿರಾಜ್ ಎಂಬುವವರು, ಯುವಜನರಲ್ಲಿ ಜನಪ್ರಿಯವಾಗಿರುವ ಹೊಗೆರಹಿತ ತಂಬಾಕು ಉತ್ಪನ್ನದ ಜಾಹೀರಾತನ್ನು ಪ್ರದರ್ಶಿಸುವ ಹಿಂಭಾಗದ ಫಲಕದೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ನ ಫೋಟೋವನ್ನು X ನಲ್ಲಿ ಹಂಚಿಕೊಂಡಿದ್ದರು.
"ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ತಂಬಾಕು, ಸಿಗರೇಟ್ ಮತ್ತು ಮದ್ಯದಂತಹ ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದು ಸಮಾಜಕ್ಕೆ ಒಳ್ಳೆಯದಲ್ಲ. ಸಮಾಜದ ಹಿತದೃಷ್ಟಿಯಿಂದ, ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ಅಂತಹ ಜಾಹೀರಾತುಗಳನ್ನು ಪ್ರದರ್ಶಿಸದಿರುವುದು ಉತ್ತಮ. ದಯವಿಟ್ಟು ಗಮನ ಕೊಡಿ" ಎಂದು ಸಿರಾಜ್ ಬರೆದಿದ್ದರು.
ಅದೇ ದಿನ ಪೋಸ್ಟ್ ಅನ್ನು ಗಮನಿಸಿದ್ದ ಮುಖ್ಯಮಂತ್ರಿಯ ವಿಶೇಷ ಕರ್ತವ್ಯ ಅಧಿಕಾರಿ ಡಾ. ವೈಷ್ಣವಿ ಕೆ ಅವರು, ತಕ್ಷಣವೇ ದೂರನ್ನು ಕೆಎಸ್‌ಆರ್‌ಟಿಸಿಗೆ ರವಾನಿಸಿದರು ಮತ್ತು ಮುಖ್ಯ ಸಂಚಾರ ವ್ಯವಸ್ಥಾಪಕರು(ಸಿಟಿಎಂ) ಕ್ರಮ ಕೈಗೊಂಡು ಬಸ್‌ನಿಂದ ತಂಬಾಕು ಜಾಹೀರಾತನ್ನು ತೆಗೆದುಹಾಕುವಂತೆ ಸೂಚಿಸಿದ್ದರು.
ಏಪ್ರಿಲ್ 17 ರಂದು ಡಾ. ವೈಷ್ಣವಿ ಅವರಿಗೆ ಬರೆದ ಪತ್ರದಲ್ಲಿ, ಸಿಟಿಎಂ ತನ್ನ ಬಸ್‌ಗಳಲ್ಲಿ ಜಾಹೀರಾತುಗಳನ್ನು ಇರಿಸಲು ಬಸ್ ನಿಗಮದಿಂದ ಪರವಾನಗಿ ಪಡೆದ ಜಾಹೀರಾತು ಸಂಸ್ಥೆಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.