ಬೆಂಗಳೂರು: ಸರ್ಕಾರಿ ಇಲಾಖೆಗಳು ನ್ಯಾಯಯುತ ಬೆಲೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅನುವು ಮಾಡಿಕೊಡುವ ಸಲುವಾಗಿ ರಾಜ್ಯದ ಐಟಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ಲಿಮಿಟೆಡ್ (ಕಿಯೋನಿಕ್ಸ್) ಅಭಿವೃದ್ಧಿಪಡಿಸಿದ ಹೊಸ ಇ-ಕಾಮರ್ಸ್ ಪೋರ್ಟಲ್ ಅನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಿಯೋನಿಕ್ಸ್ ಕಚೇರಿಯಲ್ಲಿ ಇ-ಕಾಮರ್ಸ್ ಪೋರ್ಟಲ್ ಅನ್ನು ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ತಂತ್ರಜ್ಞಾನದಿಂದಲೇ ಅಭಿವೃದ್ಧಿ; ತಂತ್ರಜ್ಞಾನದಿಂದ ಈಗ ಎಲ್ಲವೂ ಸಾಧ್ಯವಾಗಿದೆ. ನಮ್ಮಲ್ಲಿರುವ ಜ್ಞಾನದ ಭಂಡಾರ ಜಗತ್ತಿನಲ್ಲಿ ಎಲ್ಲೂ ಇಲ್ಲ. ಕಿಯೋನಿಕ್ಸ್ ಸಂಸ್ಥೆಯ ಮೂಲಕ ಇನ್ನಷ್ಟು ಗ್ರಾಮೀಣ ಯುವಜನರನ್ನೂ ತಂತ್ರಜ್ಞಾನ ಸಾಕ್ಷರರನ್ನಾಗಿ ಮಾಡೋಣ. ಈ ಹೊಸ ವೆಬ್ಸೈಟ್ ಮೂಲಕ ಕಿಯೋನಿಕ್ಸ್ ತಂಡಕ್ಕೆ ಹೊಸ ವೃತ್ತಿಪರ ಸ್ಪರ್ಶ ಸಿಕ್ಕಂತಾಗಿದೆ. ಸಚಿವರಾದ ಪ್ರಿಯಾಂಕ್ ಹಾಗೂ ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಅವರ ತಂಡದ ಸಾರಥ್ಯದಲ್ಲಿ ಕೇವಲ ಕಿಯೋನಿಕ್ಸ್ ಅಷ್ಟೇ ಅಲ್ಲ, ಇಡೀ ಐಟಿ ಕ್ಷೇತ್ರ ಹೊಸ ರೂಪ ಪಡೆಯುತ್ತಿದ್ದು, ಅದು ಇನ್ನೂ ಉನ್ನತ ಮಟ್ಟಕ್ಕೆ ಸಾಗಲಿ ಎಂದು ಹಾರೈಸುವೆ ಎಂದು ಹೇಳಿದರು.
ಐಟಿ/ಬಿಟಿ ಮತ್ತು ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳು ತಮಗೆ ಅವಶ್ಯವಾಗುವ ಸಾಮಗ್ರಿಗಳನ್ನು ಜಾಗತಿಕ ಸ್ಪರ್ಧಾತ್ಮಕ ದರಗಳಲ್ಲಿ ಹೊಂದಲು ಅನುಕೂಲವಾಗುವಂತೆ ಕಿಯೋನಿಕ್ಸ್ ಹೊಸ ಇ-ಕಾಮರ್ಸ್ ಪೋರ್ಟಲ್‌ನ್ನು ಸಿದ್ಧಪಡಿಸಲಾಗಿದೆ. ಕಂಪ್ಯೂಟರ್ ಆಧಾರಿತ ಆದೇಶ, ಪಾವತಿ, ವಿತರಣೆಯವರೆಗಿನ ಎಲ್ಲಾ ಹಂತಗಳು ಇ-ಕಾಮರ್ಸ್ ಪೋರ್ಟಲ್‌ನಲ್ಲಿ ತರಲಾಗಿದೆ. ಕಳೆದ ಎರಡು ವರ್ಷಗಳಿಂದ ಕಿಯೊನಿಕ್ಸ್ ಸಂಸ್ಥೆ ಎದುರಿಸುತ್ತಿದ್ದ ಹಲವಾರು ಸಮಸ್ಯೆಗಳಿಗೆ ಈ ಪೋರ್ಟಲ್ ಪರಿಹಾರ ನೀಡಲಿದೆ ಎಂದು ತಿಳಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿ, ಇ-ಪೋರ್ಟಲ್‌ನಲ್ಲಿ ಪಾರದರ್ಶಕ ಮೂಲಕ ವ್ಯವಹಾರ ನಡೆಸಲು ಸಾಧ್ಯವಾಗಲಿದೆ. ಟೆಂಡರ್ ಪ್ರಕ್ರಿಯೆ ಸರಳೀಕರಣಗೊಳಿಸಲು ಮತ್ತು ಪಾರ್ದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಂಪೂರ್ಣ ಪ್ರಕ್ರಿಯೆ ಡಿಜಿಟಲಿಕರಣಗೊಳಿಸಲಾಗುತ್ತಿದೆ. ಸರ್ಕಾರದ ಬೇರೆ ಇಲಾಖೆಗಳು ತಮಗೆ ಅವಶ್ಯವಾದ ಸಾಮಗ್ರಿಗಳನ್ನು ನಿಯಮಬದ್ಧವಾಗಿ ದರಗಳಲ್ಲಿ ಕೊಳ್ಳಲು ಅನುಕೂಲವಾಗುವಂತೆ ಪೋರ್ಟಲ್ ಸಿದ್ಧಪಡಿಸಿದ್ದೇವೆ. ಹೊಸ ರೂಪ ಮತ್ತು ಆಶಯಗಳೊಂದಿಗೆ ಸೇವೆಗೆ ಸಿದ್ಧವಾಗಿದ್ದೇವೆ ಎಂದರು.