ಬೆಂಗಳೂರಿಗೆ ಆಗಮಿಸಿದ ಮೃತದೇಹ 
ರಾಜ್ಯ

ಪಹಲ್ಗಾಮ್‌ ಉಗ್ರರ ದಾಳಿ: ಕನ್ನಡಿಗರ ಮೃತದೇಹ ತಾಯ್ನಾಡಿಗೆ ಆಗಮನ; ಕಾಶ್ಮೀರದಲ್ಲಿ ಸಿಲುಕಿರುವ 180 ಪ್ರವಾಸಿಗರಿಗೆ ವಿಶೇಷ ವಿಮಾನ

ಬೆಂಗಳೂರಿನ ಭರತ್ ಭೂಷಣ್ ಮತ್ತು ಶಿವಮೊಗ್ಗದ ರಿಯಲ್ ಎಸ್ಟೇಟ್ ಏಜೆಂಟ್ ಮಂಜುನಾಥ ರಾವ್ ಅವರ ಮೃತದೇಹಗಳನ್ನು ಹೊತ್ತ ವಿಮಾನವು ಬೆಳಗಿನ ಜಾವ 3.45 ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಕರ್ನಾಟಕದ ಮೂವರು ಪ್ರವಾಸಿಗರಲ್ಲಿ ಇಬ್ಬರ ಮೃತದೇಹಗಳು ಗುರುವಾರ ಬೆಳಗಿನ ಜಾವ ಬೆಂಗಳೂರು ತಲುಪಿವೆ.

ಬೆಂಗಳೂರಿನ ಭರತ್ ಭೂಷಣ್ ಮತ್ತು ಶಿವಮೊಗ್ಗದ ರಿಯಲ್ ಎಸ್ಟೇಟ್ ಏಜೆಂಟ್ ಮಂಜುನಾಥ ರಾವ್ ಅವರ ಮೃತದೇಹಗಳನ್ನು ಹೊತ್ತ ವಿಮಾನವು ಬೆಳಗಿನ ಜಾವ 3.45 ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಸಂತ್ರಸ್ತರ ಕುಟುಂಬಗಳ ಹದಿಮೂರು ಸದಸ್ಯರು ಸಹ ಅದೇ ವಿಮಾನದಲ್ಲಿ ಆಗಮಿಸಿದ್ದಾರೆ.

ಬೆಂಗಳೂರಿನ ರಾಮಮೂರ್ತಿ ನಗರದ ಸಾಫ್ಟ್‌ವೇರ್ ಎಂಜಿನಿಯರ್ ಮಧುಸೂಧನ್ ರಾವ್ ಅವರ ಮೃತದೇಹವನ್ನು ಚೆನ್ನೈಗೆ ಕೊಂಡೊಯ್ಯಲಾಗುತ್ತಿದೆ, ಅಲ್ಲಿಂದ ಅದನ್ನು ಅವರ ಹುಟ್ಟೂರು ಆಂಧ್ರಪ್ರದೇಶದ ನೆಲ್ಲೂರಿಗೆ ಸಾಗಿಸಲಾಗುವುದು.

ಮಂಜುನಾಥ ರಾವ್ ಅವರ ಸೋದರ ಮಾವ ಪ್ರದೀಪ್ ಮತ್ತು ಭೂಷಣ್ ಅವರ ಪತ್ನಿ ಸುಜಾತಾ ಅವರ ಸಂಬಂಧಿ ವಿನುತಾ ಅವರು ಮೃತದೇಹವನ್ನು ಸ್ವೀಕರಿಸಲು ವಿಮಾನ ನಿಲ್ದಾಣದಲ್ಲಿದ್ದರು. ದಾಳಿಯಲ್ಲಿ ಬದುಕುಳಿದ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ಆರ್ ಮತ್ತು ಅವರ ಮಗ ಅಭಿಜಯ ಅವರನ್ನು ಸಂಬಂಧಿಕರೊಂದಿಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಯಿತು. ರಾವ್ ಅವರ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ತೆಗೆದುಕೊಂಡು ಹೋಗಲಾಗಿದ್ದು, ಮಧ್ಯಾಹ್ನದ ಮೊದಲು ಶಿವಮೊಗ್ಗ ತಲುಪುವ ನಿರೀಕ್ಷೆಯಿದೆ.

ಭೂಷಣ್ ಅವರ ದೇಹವು ಬೆಳಿಗ್ಗೆ 5.30 ರ ಸುಮಾರಿಗೆ ಯಶವಂತಪುರದ ಮತ್ತಿಕೆರೆಯಲ್ಲಿರುವ ಅವರ ನಿವಾಸ ತಲುಪಿದೆ. ಅನಾರೋಗ್ಯದ ಕಾರಣ ಮಗನ ಸಾವಿನ ಬಗ್ಗೆ ಅವರ ವೃದ್ಧ ತಾಯಿಗೆ ಮೃತದೇಹ ಬಂದ ನಂತರವೇ ತಿಳಿಸಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಭೂಷಣ್ ಅವರ ಮೃತದೇಹವನ್ನು ಮಧ್ಯಾಹ್ನದವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ನಂತರ ಅಂತಿಮ ವಿಧಿವಿಧಾನ ನೇರವೇರಲಿದೆ.

ಬದುಕುಳಿದವರೊಂದಿಗೆ ಬಂದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಇತರರೊಂದಿಗೆ ಭಾರೀ ಭದ್ರತೆಯಲ್ಲಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿದರು. ಸಿಐಎಸ್ಎಫ್ ಮತ್ತು ಸ್ಥಳೀಯ ಪೊಲೀಸರು ವಿಮಾನ ನಿಲ್ದಾಣದ ಆವರಣದಲ್ಲಿ ಮತ್ತು ಸುತ್ತಮುತ್ತ ಬಿಗಿ ಭದ್ರತಾ ವ್ಯವಸ್ಥೆಗಳನ್ನು ನಿಯೋಜಿಸಿದ್ದರು.

ವರದಿಗಾರರೊಂದಿಗೆ ಮಾತನಾಡಿದ ಸೂರ್ಯ, ಬದುಕುಳಿದವರು ಮತ್ತು ಮೃತದೇಹಗಳು ಸುಗಮವಾಗಿ ಮತ್ತು ಸುರಕ್ಷಿತವಾಗಿ ಮರಳಲು ಸೇನಾ ಸಿಬ್ಬಂದಿ, ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಕಾರ್ಯಾಚರಣೆಗೆ ಸಹಾಯ ಮಾಡಲು ಕರ್ನಾಟಕ ಸರ್ಕಾರದಿಂದ ನಿಯೋಜಿಸಲ್ಪಟ್ಟ ಐಪಿಎಸ್ ಅಧಿಕಾರಿ ಚೇತನ್ ಅವರ ಸಂಘಟಿತ ಪ್ರಯತ್ನಗಳಿಗೆ ಅಭಿನಂದಿಸಿದರು.

ಉಪಸ್ಥಿತರಿದ್ದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, ಬಲವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ದಾಳಿಗೆ ಕಾರಣರಾದವರಿಗೆ ಪಾಠ ಕಲಿಸಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದರು.

ಕಾಶ್ಮೀರದಲ್ಲಿ ಸಿಲುಕಿರುವ ಕರ್ನಾಟಕದ 180 ಪ್ರವಾಸಿಗರನ್ನು ಹೊತ್ತ ವಿಶೇಷ ವಿಮಾನ ಗುರುವಾರ ಬೆಳಿಗ್ಗೆ ಆಗಮಿಸಿಲಿದೆ. ಕಾಶ್ಮೀರದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ತಾವು ಸಹ ಅವರೊಂದಿಗೆ ಹಿಂತಿರುಗುವುದಾಗಿ ದೃಢಪಡಿಸಿದ್ದಾರೆ. ಕಾಶ್ಮೀರದಿಂದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ದೂರವಾಣಿ ಮೂಲಕ ಮಾತನಾಡಿದ ಲಾಡ್, ತಮ್ಮ ತಂಡವು ಕಾಶ್ಮೀರದಲ್ಲಿ ಸಿಲುಕಿರುವ ಕರ್ನಾಟಕದ 180 ಪ್ರವಾಸಿಗರನ್ನು ಸಂಪರ್ಕಿಸಿದೆ ಎಂದು ಹೇಳಿದರು. "ಅವರು ಬೆಂಗಳೂರಿಗೆ ಸುರಕ್ಷಿತವಾಗಿ ಮರಳಲು ನಾವು ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದೇವೆ" ಎಂದು ಅವರು ತಿಳಿಸಿದ್ದಾರೆ. ಅವರಲ್ಲದೆ, ಕರ್ನಾಟಕದ ಇನ್ನೂ ಕೆಲವು ಪ್ರವಾಸಿಗರು ಕಾಶ್ಮೀರದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೂ ಮೊದಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಶ್ಮೀರದಲ್ಲಿ ಸಿಲುಕಿರುವ ರಾಜ್ಯದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಮರಳಿ ಕರೆತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಮಂಜುನಾಥ್ ಅವರ ಪತ್ನಿ ಪಲ್ಲವಿ ಮತ್ತು ಭರತ್ ಭೂಷಣ್ ಅವರ ಪತ್ನಿ ಸುಜಾತಾ ಅವರೊಂದಿಗೆ ಮುಖ್ಯಮಂತ್ರಿ ಮಾತನಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

SCROLL FOR NEXT