ಬೆಂಗಳೂರು: ಫುಡ್ ಡೆಲಿವರಿ ಬಾಯ್ ಮೇಲಿನ ದಾಳಿ ಪ್ರಕರಣ ಹಸಿರಾಗಿರುವಂತೆಯೇ ಬೆಂಗಳೂರಿನಲ್ಲಿ ಮತ್ತೊಂದು ಅಂತಹುದೇ ಘಟನೆ ವರದಿಯಾಗಿದ್ದು, ಕ್ಷುಲ್ಲಕ ವಿಚಾರಕ್ಕೆ ಮಹಿಳೆಯೊಬ್ಬರು ಯುವಕರಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಮಹಿಳೆಯೊಬ್ಬರು ಯುವಕರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕಾರು ಪಾರ್ಕಿಂಗ್ ಮತ್ತು ರಿವರ್ಸ್ ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಕಾರು ಚಾಲಕ ಶಿವರಾಜ್ ತನ್ನ ಕಾರನ್ನು ರಿವರ್ಸ್ ತೆಗೆಯುವ ವೇಳೆ ಸಬ್ರೀನ್ ಎಂಬ ಮಹಿಳೆ ಕಿರಿಕ್ ತೆಗೆದಿದ್ದು, ಕಾರು ಟಚ್ ಆಯಿತು ಎಂದು ಗಲಾಟೆ ಆರಂಭಿಸಿದ್ದಾರೆ. ವೃತ್ತಿಯಲ್ಲಿ ಮಹಿಳೆ ಸಬ್ರೀನ್ ಪೊಲೀಸ್ ಪೇದೆ ಎಂದು ಹೇಳಲಾಗಿದೆ.
ವಿಡಿಯೋದಲ್ಲಿರುವಂತೆ ಅಲ್ಲಿ ಸಾಕಷ್ಟು ಮಂದಿ ಇವರ ಜಗಳ ಬಿಡಿಸಲು ಮುಂದಾದರೂ ಕೇಳದ ಸಬ್ರೀನ್ ಚಾಲಕನ ಮೇಲೆ ಹಲ್ಲೆ ನಡೆಸಿ ಕಾಲಿಂದ ಒದ್ದು ಕೆಳಗೆ ಬೀಳಿಸಿದ್ದಾರೆ. ಅಲ್ಲದೆ ಈ ಘಟನೆಯ ವಿಡಿಯೋ ತೆಗೆಯುತ್ತಿದ್ದ ದರ್ಶನ್ ಎಂಬ ವ್ಯಕ್ತಿ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
NCR ದಾಖಲು
ಇನ್ನು ಹಲ್ಲೆ ಪ್ರಕರಣ ಸಂಬಂಧ ಕಾರು ಚಾಲಕ ಶಿವರಾಜ್ ಮತ್ತಿತ್ತರು ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಎನ್ ಸಿಆರ್ ದಾಖಲಿಸಿದ್ದು, ಪೊಲೀಸರು ಸಬ್ರೀನ್ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಬ್ರೀನ್ ಯುವಕರಿಗೆ ಕ್ಷಮೆ ಕೇಳಿದ್ದಾರೆ ಎಂದು ಹೇಳಲಾಗಿದೆ.
ಕ್ರಮಕ್ಕೆ ಆಗ್ರಹ
ಇನ್ನು ಬೆಂಗಳೂರಿನಲ್ಲಿ ಇಂತಹ ಹಲ್ಲೆ ಪ್ರಕರಣಗಳು ದಿನೇ ದಿನೇ ವ್ಯಾಪಕವಾಗುತ್ತಿದ್ದು, ಈ ಕುರಿತು ಬೆಂಗಳೂರು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಓರ್ವ ಪುರುಷನನ್ನು ಮಹಿಳೆ ಕಾಲಿನಿಂದ ಒದ್ದು ಹಲ್ಲೆ ಮಾಡುತ್ತಿರುವುದು ಸರಿಯಲ್ಲ ಎಂದು ಮತ್ತೋರ್ವ ಬಳಕೆದಾರರು ಟೀಕಿಸಿದ್ದಾರೆ.