ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2024-25ನೆ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯದ 31 ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ಪ್ರಕ್ರಿಯೆಯನ್ನು ಆನ್‍ಲೈನ್ ಕೌನ್ಸಿಲಿಂಗ್ ಮೂಲಕ ಕೈಗೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವರ್ಗಾವಣೆ ಪ್ರಕ್ರಿಯೆಯಲ್ಲಿ 31 ಜಿಲ್ಲೆಗಳಲ್ಲಿ ಒಟ್ಟು 2697 ನೌಕರರಿಂದ ವರ್ಗಾವಣೆಗಾಗಿ ಅರ್ಜಿಗಳು ಸ್ವೀಕೃತವಾಗಿದ್ದವು. ನೌಕರರು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆ ಹೊಂದಿದ 1,300 ನೌಕರರಿಗೆ ಆನ್ ಲೈನ್ ಮೂಲಕ ಕೌನ್ಸಿಲಿಂಗ್ ನಡೆಸಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಡಿಜಿಟಲ್ ಸಹಿ ಮಾಡಿದ ವರ್ಗಾವಣೆ ಆದೇಶಗಳನ್ನು ಹೊರಡಿಸಿ ಸ್ಥಳದಲ್ಲೆ ನೌಕರರಿಗೆ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೊದಲ ಸುತ್ತು ಹಾಗೂ ದ್ವಿತೀಯ ಸುತ್ತಿನಲ್ಲಿ ವಿಶೇಷ ಪ್ರಕರಣಗಳಾದ ಗಂಭೀರ ಅನಾರೋಗ್ಯ, ವಿಶೇಷ ಚೇತನರು ಹಾಗೂ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆ ಕೌನ್ಸ್ಸಿಲಿಂಗ್ ಅನ್ನು ಜು.25ರಂದು ನಡೆಸಿ 161 ನೌಕರರಿಗೆ ಹಾಗೂ ಎರಡನೆಯ ಹಂತದಲ್ಲಿ ಸಾಮಾನ್ಯ ಕೋರಿಕೆ ಪ್ರಕರಣಗಳ 619 ನೌಕರರಿಗೆ ಜು.28ರಂದು ಹಾಗೂ ಕೊನೆಯ ಹಂತದಲ್ಲಿ ಕಡ್ಡಾಯ ವರ್ಗಾವಣೆ ಕೌನ್ಸ್ಸಿಲಿಂಗ್ ಅನ್ನು ಜು.29 ಮತ್ತು 30ರಂದು ಕೈಗೊಂಡು 520 ನೌಕರರಿಗೆ ಡಿಜಿಟಲ್ ಸಹಿ ಮಾಡಿದ ವರ್ಗಾವಣೆ ಆದೇಶಗಳನ್ನು ನೀಡಲಾಯಿತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಮಾಲೋಚನೆ ಅವಧಿಗಳನ್ನು ಆಯಾ ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಡೆಸಿದರು, ಅವರು ಡಿಜಿಟಲ್ ಸಹಿ ಮಾಡಿದ ವರ್ಗಾವಣೆ ಆದೇಶಗಳನ್ನು ನೀಡಿದರು. ಅವುಗಳನ್ನು ಸ್ಥಳದಲ್ಲೇ ನೌಕರರಿಗೆ ಹಸ್ತಾಂತರಿಸಲಾಯಿತು ಎಂದು ಸಚಿವರು ಹೇಳಿದರು.