ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ನೇತ್ರಾವತಿ ಘಾಟ್ ಬಳಿಯ ಕಾಡುಪ್ರದೇಶದಲ್ಲಿ ಅನಾಮಿಕ ಗುರುತಿಸಿದ ಪಾಯಿಂಟ್ ನಂಬರ್ 6ರಲ್ಲಿ ನಿನ್ನೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ. ಹೀಗಾಗಿ ಎಸ್ಐಟಿ ತಂಡ ಅಸ್ಥಿಪಂಜರದ ರಹಸ್ಯ ಕೆದಕಲು ಮುಂದಾಗಿದೆ.
ವೈದ್ಯಕೀಯ-ಕಾನೂನು ಪ್ರಕರಣಗಳಲ್ಲಿ ಅಸ್ಥಿಪಂಜರಗಳು ವಯಸ್ಸು, ಲಿಂಗ, ಮತ್ತು ಸಾವಿನ ಕಾರಣದ ಬಗ್ಗೆ ಫೋರೆನ್ಸಿಕ್ ಮಾನವಶಾಸ್ತ್ರಜ್ಞರಿಗೆ ಗಮನಾರ್ಹ ಸುಳಿವುಗಳನ್ನು ನೀಡಬಹುದು, ಆದರೆ ಅವು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದ್ದರೆ ಮಾತ್ರ ಸಾಧ್ಯವಾಗುತ್ತದೆ. ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದ ಹಿನ್ನೆಲೆಯಲ್ಲಿ, ಫೋರೆನ್ಸಿಕ್ ಮಾನವಶಾಸ್ತ್ರದ ವಿಜ್ಞಾನದ ಕೆಲವು ಪ್ರಮುಖ ಫೋರೆನ್ಸಿಕ್ ವೈದ್ಯಕೀಯ ತಜ್ಞರೊಂದಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮಾಲೋಚಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಸಾಕ್ಷಿ-ದೂರುದಾರರು ಗುರುತಿಸಿದ ಆರನೇ ಸಮಾಧಿ ಸ್ಥಳದಲ್ಲಿ ಕೆಲವು ಅಸ್ಥಿಪಂಜರದ ಅವಶೇಷಗಳನ್ನು ಕಂಡುಹಿಡಿದಿದೆ. ಅದನ್ನು ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ. ಮೂಳೆಗಳನ್ನು ಪರೀಕ್ಷಿಸಲು ಈ ಪ್ರಕ್ರಿಯೆಯು ಕೆಲವು ವಾರಗಳ ಸಮಯ ತೆಗೆದುಕೊಳ್ಳುತ್ತದೆ. ಇದಲ್ಲದೆ, ಇದನ್ನು ಡಿಎನ್‌ಎ ಪ್ರೊಫೈಲಿಂಗ್‌ಗಾಗಿ ಫೋರೆನ್ಸಿಕ್ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅಸ್ಥಿಪಂಜರದ ವಯಸ್ಸು ಮತ್ತು ಸ್ಥಿತಿ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿ ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಮುಖ ಫೋರೆನ್ಸಿಕ್ ತಜ್ಞ ಮತ್ತು ಮುಖ್ಯ ವೈದ್ಯಾಧಿಕಾರಿ ಡಾ. ವರ್ಗೀಸ್ ಪಿ.ಎಸ್ ಹೇಳಿದರು.
ಅಸ್ಥಿಪಂಜರ ಒಟ್ಟಾಗಿ ಸಿಕ್ಕರೇ, ಅದರಿಂದ ಲಿಂಗ, ಅಂದಾಜು ವಯಸ್ಸು, ಎತ್ತರ ಮತ್ತು ಅನೇಕ ಸಂದರ್ಭಗಳಲ್ಲಿ ಸಾವಿಗೆ ಕಾರಣದ ಬಗ್ಗೆ ಅಮೂಲ್ಯವಾದ ವೈಜ್ಞಾನಿಕ ಪುರಾವೆಗಳನ್ನು ಒದಗಿಸುತ್ತವೆ. ಅಸ್ಥಿಪಂಜರವನ್ನು ಕಾಣೆಯಾದ ವ್ಯಕ್ತಿಯೊಂದಿಗೆ ಜೋಡಿಸಲು, ಕಾಣೆಯಾದ ವ್ಯಕ್ತಿಯ ಛಾಯಾಚಿತ್ರದ ಮೇಲೆ ತಲೆಬುರುಡೆಯನ್ನು ಮರು-ಅಳವಡಿಸಲು. ಬಯೋಲಾಜಿಕಲ್ ಸಂಬಂಧಿಯಿಂದ ಡಿಎನ್‌ಎ ಮಾದರಿ ಇರಬೇಕು ಎಂದು ವರ್ಗೀಸ್ ತಿಳಿಸಿದ್ದಾರೆ.
ವಿಧಿವಿಜ್ಞಾನ ತಜ್ಞರು ಮಾನವ ತಲೆಬುರುಡೆ, ಉದ್ದನೆಯ ಮೂಳೆಗಳಿಂದ ಲಿಂಗ, ವಯಸ್ಸು ಮತ್ತು ಸಾವಿನ ಸಂಭವನೀಯ ಕಾರಣವನ್ನು ಅಳೆಯಬಹುದು ಎಂದು ಅವರು ಹೇಳಿದರು. "ಅಸ್ಥಿಪಂಜರದ ಅವಶೇಷಗಳು 22 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಮೌಲ್ಯಮಾಪನ ನಿಖರವಾಗಿರಬಹುದು.
ವಯಸ್ಸಾದ ವ್ಯಕ್ತಿಗಳಲ್ಲಿ ಅಂದಾಜಿನ ಮೇಲೆ ನಿರ್ಧರಿಸಲಾಗುತ್ತದೆ. ಮೂಳೆಗಳಿಂದ ದೇಹದ ಮೇಲೆ ತೀವ್ರವಾದ ಗಾಯಗಳಾಗಿವೆಯೇ ಎಂದು ಹೇಳಬಹುದು, ಏಕೆಂದರೆ ಮುರಿತದ ಚಿಹ್ನೆಗಳು ಇರುತ್ತವೆ. ವೈದ್ಯಕೀಯ-ಕಾನೂನು ಪ್ರಕರಣದಲ್ಲಿ ತಲೆಬುರುಡೆಯ ಮುರಿತವು ವಿಧಿವಿಜ್ಞಾನದ ಪ್ರಮುಖ ಸಾಕ್ಷ್ಯವಾಗಿದೆ. ವಿಷಪೂರಿತತೆಯಿಂದ ಸಾವನ್ನು ಮೂಳೆಗಳಲ್ಲಿ ಕಂಡುಬರುವ ವಿಷದ ನಿಕ್ಷೇಪಗಳಿಂದಲೂ ಖಚಿತಪಡಿಸಿಕೊಳ್ಳಬಹುದು ಎಂದು ವಿಧಿವಿಜ್ಞಾನ ತಜ್ಞರು ಹೇಳಿದರು.
ದವಡೆ ಹಲ್ಲುಗಳು ಮತ್ತು ಉದ್ದನೆಯ ಮೂಳೆಯಿಂದ ಹೊರತೆಗೆಯಲಾದ ಡಿಎನ್ ಎ ಇಂದ ವಿಶೇಷವಾಗಿ ತೊಡೆಯ ಮೂಳೆ (ಎಲುಬು) ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿದೆ. ನಂತರ ಮಾದರಿಯನ್ನು ಸತ್ತವರ ರಕ್ತ ಸಂಬಂಧಿಯ ಡಿಎನ್‌ಎ ಜೊತೆ ಹೋಲಿಸಲಾಗುತ್ತದೆ" ಎಂದು ವರ್ಗೀಸ್ ಹೇಳಿದರು. ಒಂದು ವೇಳೆ ಉಸಿರುಗಟ್ಟಿಸುವಿಕೆಯಿಂದ ಸಾವು ಸಂಭವಿಸಿದ್ದರೆ ಮೂಳೆಗಳು ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಎಂದು ಅವರು ಹೇಳಿದರು.
ತಾಜಾ ಅಸ್ಥಿಪಂಜರಗಳಿಂದ ಹೆಚ್ಚಿನ ಮಾಹಿತಿ ಸಿಗುತ್ತದೆ. ಅಸ್ಥಿಪಂಜರಗಳು ಕೊಳೆತು ಹೋಗಿದ್ದರೇ ಅವುಗಳಿಂದ ಮೃದು ಅಂಗಾಂಶಗಳನ್ನು ಪಡೆಯುವುದು ಕಷ್ಟ.
ದೇಹವನ್ನು ಹೂಳಲಾದ ಮಣ್ಣಿನ ಸ್ವರೂಪವನ್ನು ಅವಲಂಬಿಸಿ ಅಸ್ಥಿಪಂಜರ ಕೊಳೆಯಲು ಒಂದರಿಂದ ಮೂರು ತಿಂಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಮಣ್ಣಿನಲ್ಲಿರುವ ವಿಷಗಳು ಮಾನವ ಅವಶೇಷಗಳನ್ನು ಕಲುಷಿತಗೊಳಿಸಬಹುದು ಮತ್ತು ವಿಧಿವಿಜ್ಞಾನ ಮಾನವಶಾಸ್ತ್ರವನ್ನು ಕಷ್ಟಕರವಾಗಿಸಬಹುದು" ಎಂದು ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ವಿಧಿವಿಜ್ಞಾನ ತಜ್ಞರು ಹೇಳಿದರು.
ಕಾಣೆಯಾದ ವ್ಯಕ್ತಿಗಳ ಗುರುತು, ಸಾವಿನ ಕಾರಣ, ವಿಶೇಷವಾಗಿ ಅವಶೇಷಗಳು ಅಸ್ಥಿಪಂಜರವಾದಾಗ, ಕೊಳೆತಾಗಿದ್ದಾಗ ಅಥವಾ ಗುರುತಿಸಲಾಗದಿದ್ದಾಗ, ವಿಧಿವಿಜ್ಞಾನ ಮಾನವಶಾಸ್ತ್ರವು ಒಂದು ನಿರ್ಣಾಯಕ ವಿಧಾನವಾಗಿದೆ. ವಿಧಿವಿಜ್ಞಾನದ ಮಾನವಶಾಸ್ತ್ರಜ್ಞರು ಮೃತರ ವಯಸ್ಸು, ಲಿಂಗ, ಪೂರ್ವಜರು ಮತ್ತು ನಿಲುವನ್ನು ನಿರ್ಧರಿಸಲು ಅಸ್ಥಿಪಂಜರದ ಅವಶೇಷಗಳನ್ನು ನಿರ್ಣಯಿಸುತ್ತಾರೆ . ವೈದ್ಯಕೀಯ-ಕಾನೂನು ಪ್ರಕರಣಗಳಲ್ಲಿ ಸಾವಿನ ಕಾರಣ ಮತ್ತು ವಿಧಾನವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.