ಮಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ದೂರುದಾರರ ಪರ ವಕೀಲರು ವಿಶೇಷ ತನಿಖಾ ತಂಡದ (SIT) ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, SIT ಯಲ್ಲಿರುವ ಪೊಲೀಸ್ ಅಧಿಕಾರಿ ಮಂಜುನಾಥ ಗೌಡ ಅವರು ದೂರುದಾರರು ತಮ್ಮ ದೂರನ್ನು ಹಿಂಪಡೆಯುವಂತೆ ಬೆದರಿಕೆ ಮತ್ತು ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ SIT ಯ ಮೂಲಗಳು ಈ ಆರೋಪಗಳನ್ನು ನಿರಾಕರಿಸಿವೆ. ಇವು ಆಧಾರರಹಿತ ಆರೋಪಗಳಲ್ಲದೆ ಬೇರೇನೂ ಅಲ್ಲ. ಆದರೂ ನಾವು ಅದನ್ನು ಪರಿಶೀಲಿಸುತ್ತೇವೆ ಎಂದು SIT ಅಧಿಕಾರಿಯೊಬ್ಬರು TNIE ಗೆ ತಿಳಿಸಿದ್ದಾರೆ.
ತಮ್ಮ ದೂರಿನ ಮೂಲಕ ಘಟನೆಯನ್ನು ವಿವರಿಸಿದ ವಕೀಲೆ ಅನನ್ಯ ಗೌಡ, ನಿನ್ನೆ ಆಗಸ್ಟ್ 1 ರ ಶುಕ್ರವಾರ ರಾತ್ರಿ ಬೆಳ್ತಂಗಡಿಯ SIT ಕಚೇರಿಯಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಸದರಿ ಅಧಿಕಾರಿ ತಮ್ಮ ಮೊಬೈಲ್ ಫೋನ್‌ನಲ್ಲಿ ಹೇಳಿಕೆಯನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕೆಲವು ಮಾಧ್ಯಮಗಳು ಪೊಲೀಸ್ ಅಧಿಕಾರಿಯನ್ನು SIT ಯಿಂದ ತೆಗೆದುಹಾಕುವಂತೆ ವಕೀಲರು ಒತ್ತಾಯಿಸಿದ್ದಾರೆ ಎಂದು ವರದಿ ಮಾಡಿವೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ದೂರನ್ನು ಹಿಂಪಡೆಯಲು ಒತ್ತಡ ಹೇರಲಾಯಿತು ಮತ್ತು ದೂರುದಾರರು ಮೂಲ ದೂರನ್ನು ಹಿಂಪಡೆಯಲು ಇಚ್ಛಿಸಿರುವುದಾಗಿ ಅಧಿಕಾರಿ ತಪ್ಪಾಗಿ ಹೇಳಿದ್ದಾರೆ' ಎಂದು ದೂರುದಾರರು ಆರೋಪಿಸಿರುವುದಾಗಿ ವಕೀಲರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬೆಳವಣಿಗೆಯಿಂದ ಆಘಾತಕ್ಕೊಳಗಾಗಿದ್ದೇವೆ. ತನಿಖೆಯ ಮುಂದಿನ ಹಂತಗಳಿಂದ ಮಂಜುನಾಥ ಗೌಡ ಅವರನ್ನು ತಕ್ಷಣವೇ ಹೊರಗಿಡಬೇಕೆಂದು ಕೇಳಿಕೊಳ್ಳುತ್ತೇವೆ. ತನಿಖಾ ಹಂತದಲ್ಲಿ ದೂರುದಾರ-ಸಾಕ್ಷಿಯು ಮುಕ್ತವಾಗಿ ನಿರ್ಭೀತಿಯಿಂದ ಮಾತನಾಡಲು ಅವಕಾಶ ನೀಡಲು ಅವರನ್ನು ಹೊರಗಿಡುವುದು ಅವಶ್ಯಕ ಎಂದು ವಕೀಲರು ದೂರಿನಲ್ಲಿ ತಿಳಿಸಿದ್ದಾರೆ.