ಬೆಂಗಳೂರು: ಆಗಸ್ಟ್ 5 ರಂದು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ರಾಜ್ಯ ಸಾರಿಗೆ ನೌಕರರು ನಿರ್ಧರಿಸಿದ್ದು, ಇದರ ನಡುವಲ್ಲೇ ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಿರುವ ರಾಜ್ಯ ಸರ್ಕಾರ ನೌಕರರಿಗೆ ಟಕ್ಕರ್ ಕೊಡಲು ಮುಂದಾಗಿದೆ.
ವೇತನ ಹೆಚ್ಚಳ ಮತ್ತು ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಆ.5ರಿಂದ ಕರ್ತವ್ಯ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಮುಷ್ಕರಮಾಡುವುದಾಗಿ ಘೋಷಿಸಲಾಗಿದೆ.
ನೌಕರರ ಮುಷ್ಕರ ತಡೆಯಲು ಸರ್ಕಾರ ಈಗಾಗಲೇ ಹಲವು ಕಸರತ್ತು ಆರಂಭಿಸಿದೆ. ಅದರ ಭಾಗವಾಗಿ ಶನಿವಾರ ಕಾರ್ಮಿಕ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸಾರಿಗೆ ನೌಕರ ಸಂಘಟನೆಗಳ ಪ್ರಮುಖರು ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳ ನಡುವೆ ರಾಜೀ ಸಂಧಾನ ಸಭೆ ನಡೆಸಲಾಗಿದೆ. ಆದರೆ, ಈ ಸಭೆ ವಿಫಲವಾಗಿದೆ. ಹೀಗಾಗಿ ಆ.4ರಂದು ನಡೆಯಲಿರುವ ಮುಖ್ಯಮಂತ್ರಿ ಅಧ್ಯಕ್ಷತೆಯ ಸಭೆಯಲ್ಲಿ ಮುಷ್ಕರದ ಭವಿಷ್ಯ ನಿರ್ಧಾರವಾಗಲಿದೆ.
ಇದರ ನಡುವೆಯೇ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಉದ್ದೇಶದಿಂದ ಖಾಸಗಿ ಬಸ್, ಟ್ಯಾಕ್ಸಿ ಸೇರಿ ಇನ್ನಿತರ ವಾಹನ ಮಾಲೀಕರ ಜತೆಗೆ ಸಾರಿಗೆ ಇಲಾಖೆ ಆಯುಕ್ತರು ಸಭೆ ನಡೆಸಿದ್ದು, ಮುಷ್ಕರದ ವೇಳೆ ಸಾರಿಗೆ ಸೇವೆ ನೀಡಲು ಬೆಂಬಲ ಕೋರಿದರು. ಅದಕ್ಕೆ ಸಮ್ಮತಿಸಿರುವ ಖಾಸಗಿ ವಾಹನ ಮಾಲೀಕರು, ಬೆಂಬಲ ನೀಡುವುದಕ್ಕೆ ಬದಲಾಗಿ ಬೇಡಿಕೆಗಳ ಈಡೇರಿಕೆಗೂ ಸರ್ಕಾರ ಮುಂದಾಗಬೇಕು ಎಂದು ಷರತ್ತು ವಿಧಿಸಿದ್ದಾರೆ.
ಮುಷ್ಕರದ ಸಮಯದಲ್ಲಿ ಕಾರ್ಯನಿರ್ವಹಿಸುವ ಬಸ್‌ಗಳಿಗೆ 15 ದಿನಗಳ ರಸ್ತೆ ತೆರಿಗೆ ವಿನಾಯಿತಿ, 60:40 ಪರ್ಮಿಟ್ ನೀತಿಯ ಅನುಷ್ಠಾನ, ಖಾಸಗಿ ನಿರ್ವಾಹಕರಿಗೆ ಶೇ.40ರಷ್ಟು ಪರವಾನಗಿಗಳನ್ನು ಕಾಯ್ದಿರಿಸುವುದು, ಡಿಜಿಟಲ್ ಕಣ್ಗಾವಲು ಲೆಕ್ಕಪರಿಶೋಧನಾ ವ್ಯವಸ್ಥೆಯಡಿ ವಿಧಿಸಲಾದ ದಂಡದ ಮೇಲೆ ಶೇ.50ರಷ್ಟು ವಿನಾಯಿತಿ, ಅಧಿಸೂಚಿತ ಸಮಯ ಮತ್ತು ಮಾರ್ಗವನ್ನು ಉಲ್ಲಂಘಿಸುವ ಸರ್ಕಾರಿ ಬಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಷರತ್ತುಗಳನ್ನು ವಿಧಿಸಿದೆ ಎಂದು ತಿಳಿದುಬಂದಿದೆ.
ಚರ್ಚೆಗಳು ನಡೆಯುತ್ತಿವೆ. ಅಂತಿಮವಾಗಿ ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆ ಎದುರಾಗದಂತೆ ಮಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.