ತುಮಕೂರು: ಕರ್ನಾಟಕದಲ್ಲಿ ವನ್ಯಜೀವಿಗಳ ಸರಣಿ ಸಾವು ಪ್ರಕರಣ ಮುಂದುವರೆದಿದ್ದು, 4 ಹುಲಿಗಳ ಸಾವು ಪ್ರಕರಣ ಹಸಿರಾಗಿರುವಂತೆಯೇ ಇತ್ತ 20 ನವಿಲುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ.
ಕರ್ನಾಟಕದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರ ಗ್ರಾಮದ ಕೆರೆ ಕೋಡಿ ನೀರು ಹರಿಯುವ ಪಕ್ಕದ ಜಮೀನುಗಳಲ್ಲಿ 5 ಗಂಡು ಹಾಗೂ 15 ಹೆಣ್ಣು ಸೇರಿ ಒಟ್ಟು 20 ನವಿಲುಗಳು ನಿಗೂಢವಾಗಿ ಸಾವನ್ನಪ್ಪಿರುವುದು ಪತ್ತೆ ಆಗಿದೆ.
ಬೆಳಗ್ಗೆ ರೈತರು ಜಮೀನಿಗೆ ಬಂದಾಗ ನವಿಲುಗಳ ಮೃತದೇಹಗಳು ಪತ್ತೆ ಆಗಿದ್ದು, ಆಗಸ್ಟ್ 1ರ ರಾತ್ರಿ ನವಿಲುಗಳು ಮೃತಪಟ್ಟ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕ್ರಿಮಿನಾಶಕ ಸೇವನೆ ಶಂಕೆ
ಇನ್ನು ನವಿಲುಗಳ ಸಾವಿಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಕ್ರಿಮಿನಾಶಕ ಸಿಂಪಡಣೆ ಮಾಡಿರುವ ಬೆಳೆಗಳನ್ನು ಸೇವಿಸಿ ನವಿಲುಗಳು ಮೃತಪಟ್ಟಿರಬಹುದು ಅಥವಾ ಯಾರಾದರೂ ಏನಾದರೂ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಅಧಿಕಾರಿಗಳು ದೌಡು
ಇತ್ತ ನವಿಲುಗಳ ಸಾವಿನ ವಿಚಾರ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನ್ಯಾಯಾಧೀಶರ ಅನುಮತಿ ಬಳಿಕ ಎಫ್ಎಸ್ಎಲ್ಗೆ ರವಾನೆ ಮಾಡಲಾಗಿದೆ. ಆ ಮೂಲಕ ನವಿಲುಗಳ ಸಾವಿನ ಕಾರಣದ ವರದಿ ಪಡೆಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.
ಸಚಿವ ಈಶ್ವರ್ ಖಂಡ್ರೆ ಆಘಾತ, ತನಿಖೆಗೆ ಆದೇಶ
ಇನ್ನು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಸಿ ಬಳಿ ರೈತನ ಜಮೀನಿನಲ್ಲಿ 19 ನವಿಲುಗಳು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಆಘಾತ ವ್ಯಕ್ತಪಡಿಸಿದ್ದು, ಈ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.
ನಮ್ಮ ರಾಷ್ಟ್ರೀಯ ಪಕ್ಷಿ ನವಿಲಿನ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನವಿಲುಗಳ ಸಾವು ಕೀಟನಾಶಕ ಸೇವನೆಯಿಂದ ಸಂಭವಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನವಿಲುಗಳನ್ನು ಕೊಲ್ಲಲು ಈ ಕೀಟನಾಶಕವನ್ನು ಬಳಸಲಾಗಿದೆಯೇ ಅಥವಾ ಬೆಳೆಗಳ ಮೇಲೆ ಸಿಂಪಡಿಸಲಾದ ಕೀಟನಾಶಕ ತುಂಬಿದ ಬೆಳೆಗಳನ್ನು ತಿಂದು ನವಿಲುಗಳು ಸಾವನ್ನಪ್ಪಿವೆಯೇ ಎಂದು ತನಿಖೆ ನಡೆಸಲು ಆದೇಶಿಸಲಾಗಿದ್ದು, 5 ದಿನಗಳಲ್ಲಿ ವರದಿ ಸಲ್ಲಿಸಲು ಮತ್ತು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲು ಅವರು ಡಿಸಿಎಫ್ ನೇತೃತ್ವದ ತಂಡಕ್ಕೆ ನಿರ್ದೇಶನ ನೀಡಿದ್ದಾರೆ.
ಶೆಡ್ಯೂಲ್ 1 ಮತ್ತು 2 ರ ಅಡಿಯಲ್ಲಿ ವನ್ಯಜೀವಿಗಳ ಯಾವುದೇ ಸಾವನ್ನು ಲೆಕ್ಕಪರಿಶೋಧನೆ ಮಾಡಬೇಕು ಮತ್ತು ತಕ್ಷಣವೇ ಸಚಿವರ ಕಚೇರಿಗೆ ಮಾಹಿತಿಯನ್ನು ಒದಗಿಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.
ರಾಜ್ಯದಲ್ಲಿ ಮುಂದವರೆದ ವನ್ಯಜೀವಿಗಳ ಸಾವು
ಇನ್ನು ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವನ್ಯಜೀವಿಗಳ ಸಾವು ಇದೇ ಮೊದಲೇನಲ್ಲ.. ಈ ಹಿಂದೆ ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಹತ್ಯೆ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಹುಲಿಗಳನ್ನ ಕೊಂದ ಮೂವರನ್ನು ಪೊಲೀಸರು ಬಂಧಿಸಿದ್ದರು.
ಈ ಪ್ರಕರಣದ ಬಳಿಕ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮದ ಹೊರವಲಯದಲ್ಲಿ ಬರೋಬ್ಭರಿ 18 ಕೋತಿಗಳ ಶವ ಪತ್ತೆ ಆಗಿತ್ತು. ಕಿಡಿಗೇಡಿಗಳು ವಿಷ ಹಾಕಿದ್ದರು. ವಿಷ ಸೇವಿಸಿ ನಿತ್ರಾಣವಾದ ವಾನರ ಸೇನೆಯನ್ನ ಗೋಣಿ ಚೀಲದಲ್ಲಿ ತುಂಬಿಕೊಂಡು ಬಂದು ಕಂದೇಗಾಲ ಗ್ರಾಮದ ಹೊರ ವಲಯದಲ್ಲಿ ಬಿಸಾಡಿ ಹೋಗಿದ್ದರು. ಇದೀಗ ನವಿಲುಗಳ ಸಾವು ಸಂಭವಿಸಿದೆ.