ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ನಿಗೂಢ ಸರಣಿ ಸಾವುಗಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ಕ್ಕೆ ಸೋಮವಾರ ಮತ್ತೊಂದು ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲ್ಲೂಕಿನ ಇಚಿಲಂಪಾಡಿ ನಿವಾಸಿ, ಸಾಮಾಜಿಕ ಹೋರಾಟಗಾರ ಜಯಂತ್ ಅವರು ಇಂದು ಮೂವರು ವ್ಯಕ್ತಿಗಳ ಜೊತೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿ, ದೂರು ನೀಡಿದ್ದಾರೆ.
15 ವರ್ಷಗಳ ಹಿಂದೆ ನಡೆದ ಹದಿಹರೆಯದ ಬಾಲಕಿಯ ನಿಗೂಢ ಸಾವಿನ ಬಗ್ಗೆ ಜಯಂತ್ ಅವರು ಎಸ್ಐಟಿಗೆ ದೂರು ನೀಡಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಹುಡುಗಿಯ ಶವವನ್ನು ಯಾವುದೇ ಕಾನೂನು ಪ್ರಕ್ರಿಯೆಗಳಿಲ್ಲದೆ ಹೂಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ ಮತ್ತು ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೇಲೆ ಸಂಪೂರ್ಣ ನಂಬಿಕೆ ಇರುವುದರಿಂದ ದೂರು ದಾಖಲಿಸಲು ಮುಂದೆ ಬಂದಿದ್ದಾರೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಡಾ. ಅರುಣ್ ಕೆ ಅವರು ತಿಳಿಸಿದ್ದಾರೆ.
ಜಯಂತ್ ಎಂಬ ವ್ಯಕ್ತಿ ಆರಂಭದಲ್ಲಿ ಎಸ್‌ಐಟಿಯನ್ನು ಸಂಪರ್ಕಿಸಿದ್ದರು. ಆದರೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲು ಸೂಚಿಸಲಾಯಿತು ಮತ್ತು ಸೋಮವಾರ ಅವರ ದೂರು ಸ್ವೀಕರಿಸಲಾಗಿದೆ. ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
2002-03ರ ಅವಧಿಯಲ್ಲಿ ರಾಜ್ಯ ಹೆದ್ದಾರಿ 37ರ ಅರಣ್ಯದಲ್ಲಿ ಮೃತದೇಹವೊಂದನ್ನು ಎಸೆದು ಹೋಗಲಾಗಿತ್ತು. ಈ ವಿಷಯವನ್ನು ಸ್ಥಳೀಯ ನಿವಾಸಿಯೊಬ್ಬರು ಬೆಳ್ತಂಗಡಿ ಇನ್ಸ್‌ಪೆಕ್ಟರ್‌ಗೆ ತಿಳಿಸಿದ್ದರು. ಘಟನೆ ನಡೆದು ಒಂದು ವಾರದ ನಂತರ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಬಂದಿದ್ದಾರೆ. ಅದು 35 ರಿಂದ 40 ವರ್ಷ ಹೆಂಗಸಿನ ಶವ. ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಿ, 2 ಅಡಿ ಆಳದ ಹೊಂಡ ತೆಗೆದು ಹೂತು ಹಾಕಿದ್ದಾರೆ. ಆದರೆ ಮೃತಪಟ್ಟಿದ್ದವರ ವಯಸ್ಸು ಸುಮಾರು 13 ರಿಂದ 15 ವರ್ಷದ ಹೆಣ್ಣು ಮಗು ಅಂತ ಜಯಂತ್ ದೂರಿದ್ದಾರೆ.