ಬೆಂಗಳೂರು: ನಿನ್ನೆ ಸೋಮವಾರ ಸಾಯಂಕಾಲ ಸುರಿದ ನಿರಂತರ ಮಳೆ ನಗರ ನಿವಾಸಿಗಳಿಗೆ ಹಗಲಿನಲ್ಲಿದ್ದ ಬಿಸಿಲಿನ ತಾಪಕ್ಕೆ ತಂಪಾಗಿಸಿತು.
ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಕರ್ನಾಟಕದಾದ್ಯಂತ ಮುಂದಿನ ಮೂರು ದಿನಗಳವರೆಗೆ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ವಾರ ಕರಾವಳಿಯ 11 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಲಾಗಿತ್ತು.
ಬೆಂಗಳೂರು ನಗರದಲ್ಲಿ ಕಳೆದ ರಾತ್ರಿ ಸುರಿದ 45 ಮಿಮೀ ಮಳೆಯಿಂದ ಕಸ್ತೂರಿನಗರದ ಬಿಡಿಎ ಲೇಔಟ್‌ನಲ್ಲಿ 20 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತು. ಮಳೆಯಿಂದಾಗಿ ಮುಖ್ಯ ರಸ್ತೆಗಳು ಜಲಾವೃತಗೊಂಡವು, ಹೊಸಕೋಟೆಗೆ ಹೋಗುವ ರಾಮಮೂರ್ತಿ ನಗರ ರಸ್ತೆ ಮತ್ತು ಹೊಸೂರು ರಸ್ತೆಯ ಬಳಿಯ ವೀರಸಂದ್ರದಲ್ಲಿ ಸಂಚಾರಕ್ಕೆ ಅಡ್ಡಿಯಾಯಿತು. ರಾಮಮೂರ್ತಿ ನಗರದ ಎನ್‌ಆರ್‌ಐ ಲೇಔಟ್‌ನಲ್ಲಿ ಮರವೊಂದು ಉರುಳಿಬಿದ್ದಿದೆ.
ಕಸ್ತೂರಿನಗರ ನಿವಾಸಿಗಳ ಪ್ರಕಾರ, ಮಧ್ಯರಾತ್ರಿ ಜಾವ 12.30 ರ ಸುಮಾರಿಗೆ, ಚರಂಡಿಗಳಿಂದ ನೀರು ಹೊರಬಂದು ರಸ್ತೆಗಳಿಗೆ ಮತ್ತು ಮನೆಗಳಿಗೆ ನುಗ್ಗಿ, ಸಂಪ್‌ಗಳು, ನೆಲಮಾಳಿಗೆಗಳು, ಲಿಫ್ಟ್‌ಗಳು ಮತ್ತು ಪೀಠೋಪಕರಣಗಳಿಗೆ ಹಾನಿಯಾಗಿದೆ.
ಕಸ್ತೂರಿನಗರ ಪಶ್ಚಿಮ, ಪುರವಂಕರ ಮಿಡ್‌ಟೌನ್ ಅಪಾರ್ಟ್‌ಮೆಂಟ್‌ಗಳು ಮತ್ತು ವಿಜಿನಾಪುರದ ಪ್ರದೇಶಗಳನ್ನು ಟಿನ್ ಫ್ಯಾಕ್ಟರಿಯೊಂದಿಗೆ ಸಂಪರ್ಕಿಸುವ ಅಂಡರ್‌ಪಾಸ್ ಜಲಾವೃತವಾಗಿದ್ದು, ನಿವಾಸಿಗಳು ಟಿನ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣ ಅಥವಾ ಬಸ್ ನಿಲ್ದಾಣವನ್ನು ತಲುಪಲು 4-6 ಕಿ.ಮೀ. ಪರ್ಯಾಯ ಮಾರ್ಗವನ್ನು ತೆಗೆದುಕೊಳ್ಳಬೇಕಾಗಿದೆ.
ಬೆನ್ನಿಗಾನಹಳ್ಳಿ ಕೆರೆಯ ಉತ್ತರ ಭಾಗದ ಹೂಳು ತೆಗೆಯುವುದು 25 ವರ್ಷಗಳಿಂದ ಬಾಕಿ ಉಳಿದಿರುವುದು ಮತ್ತು ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆನೀರು ಚರಂಡಿ ಕೆಲಸದಿಂದಾಗಿ ಪ್ರವಾಹ ಉಂಟಾಗಿದೆ.
ಕೆರೆಯ ಉತ್ತರ ಭಾಗವು ಮೂರು ಕಡೆಗಳಲ್ಲಿ ರೈಲ್ವೆ ಹಳಿಗಳ ಕಾರಣದಿಂದಾಗಿ ಸಂಪರ್ಕ ಕಡಿತಗೊಂಡಿದೆ. ಕೆರೆಯು ಬಿಬಿಎಂಪಿಯ ಸ್ವತ್ತಾಗಿದ್ದರೂ, ಅದಕ್ಕೆ ಪ್ರವೇಶವು ರೈಲ್ವೆ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಕೆರೆಯ ಹೂಳು ತೆಗೆದು, ಕಸ್ತೂರಿನಗರ ಪಶ್ಚಿಮ ಭಾಗದಿಂದ ಬರುವ ಮಳೆನೀರಿನ ಚರಂಡಿಯನ್ನು ಸರಿಪಡಿಸಿದರೆ, ಕೆರೆಯ ಉತ್ತರ ಮತ್ತು ದಕ್ಷಿಣದ ನಡುವಿನ ಒಳಹರಿವಿನ ಜೊತೆಗೆ ಪ್ರವಾಹ ನಿಲ್ಲುತ್ತದೆ ಎಂದು ಕಸ್ತೂರಿನಗರ ವೆಲ್ಫೇರ್ ಅಸೋಸಿಯೇಷನ್ ರಮಾನಾಥ್ ರಾವ್ ಹೇಳುತ್ತಾರೆ.
ರೈಲ್ವೆ ಮತ್ತು ಬಿಬಿಎಂಪಿ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ಕಸ್ತೂರಿನಗರದ ಪಶ್ಚಿಮ ಭಾಗದಿಂದ ಬಿಬಿಎಂಪಿಗೆ ಹೂಳು ತೆಗೆಯುವ ಕೆಲಸವನ್ನು ಕೈಗೊಳ್ಳಲು ಅವಕಾಶ ನೀಡಲಾಗುವುದು ಮತ್ತು ಪ್ರವೇಶವನ್ನು ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಸ್ತೂರಿನಗರ ನಿವಾಸಿಗಳ ಕಲ್ಯಾಣ ಸಂಘದ ಸದಸ್ಯ ಬಶೀರ್ ಜಮಾದಾರ್, ಅಂಡರ್‌ಪಾಸ್ ರಾಮಮೂರ್ತಿ ನಗರ, ಹೊರಮಾವು ಮತ್ತು ವೈಟ್‌ಫೀಲ್ಡ್‌ಗೆ ಟಿನ್ ಫ್ಯಾಕ್ಟರಿ ಮೂಲಕ ಸಂಪರ್ಕ ಕಲ್ಪಿಸುತ್ತದೆ. ಪ್ರತಿ ಮಳೆ ಬಂದಾಗ, ಅಂಡರ್‌ಪಾಸ್ ಸಂಚಾರಕ್ಕೆ ಮುಚ್ಚಲ್ಪಡುತ್ತದೆ. ವಾಹನ ಸವಾರರು ಟಿನ್ ಫ್ಯಾಕ್ಟರಿ ತಲುಪಲು 6 ಕಿ.ಮೀ. ಪರ್ಯಾಯ ಮಾರ್ಗವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಕಷ್ಟ ತೋಡಿಕೊಂಡರು.
ಬಿಬಿಎಂಪಿಯಿಂದ ಎರಡು ಮೋಟಾರ್ ಪಂಪ್‌ಗಳನ್ನು ಸ್ಥಾಪಿಸಲಾಗಿದೆ ಆದರೆ ಒಂದು ಕಾರ್ಯನಿರ್ವಹಿಸುವುದಿಲ್ಲ, ಇದಕ್ಕೆ ಯಾವುದೇ ಶಾಶ್ವತ ಪರಿಹಾರವಿಲ್ಲ, ಆದ್ದರಿಂದ ಅಪಾರ್ಟ್‌ಮೆಂಟ್ ನಿವಾಸಿಗಳು ಮಳೆಯ ಸಮಯದಲ್ಲಿ ಸಿಲುಕಿಕೊಳ್ಳುತ್ತಾರೆ ಎಂದು ಪುರವಂಕರ ಮಿಡ್‌ಟೌನ್ ನಿವಾಸಿ ರಾಖಿ ಪಾಲ್ ನಂದಿ ಹೇಳುತ್ತಾರೆ.
ನಗರದಾದ್ಯಂತ ನಿನ್ನೆ ಸುರಿದ ಮಳೆ (ಮಿ.ಮೀಟರ್ ನಲ್ಲಿ)
ದೊಡ್ಡಬಿದಿರಕಲ್ಲು : 42
ಬಾಗಲಗುಂಟೆ : 35
ಶೆಟ್ಟಿಹಳ್ಳಿ: 28.5
ಯಲಹಂಕ: 27.5
ಚೊಕ್ಕಸಂದ್ರ: 24
ಚೌಡೇಶ್ವರಿ: 20.5
ಸಂಪಂಗಿರಾಮ ನಗರ: 16.5
ಮೂಲ: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ