ಮಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮಾನವ ಅವಶೇಷಗಳು ಪತ್ತೆಯಾದ ಸ್ಥಳ ಸಂಖ್ಯೆ 14 ರಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಗೆಯುವ ಕಾರ್ಯವನ್ನು ಪ್ರಾರಂಭಿಸಿದೆ.
11ನೇ ಸ್ಥಳದಿಂದ ಸುಮಾರು 80 ಮೀಟರ್ ದೂರದಲ್ಲಿರುವ ಮರದ ಕೆಳಗೆ ತಲೆಬುರುಡೆ, ಸೀರೆ ಮತ್ತು ಪುರುಷನ ಚಪ್ಪಲಿಗಳು ಸೇರಿದಂತೆ ಮಾನವ ಅವಶೇಷಗಳು ಕಂಡುಬಂದ ಸ್ಥಳದಲ್ಲಿ ಅಗೆಯುವ ಕಾರ್ಯ ನಡೆಯುತ್ತಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ದೂರುದಾರರು ಎಸ್‌ಐಟಿ ಅಧಿಕಾರಿಗಳನ್ನು ಹೊಸ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮಾನವ ಅವಶೇಷಗಳು ಪತ್ತೆಯಾದ ಈ ಸ್ಥಳವನ್ನು 14ನೇ ಸ್ಥಳ ಎಂದು ಗುರುತಿಸಲಾಗಿದೆ.
ಪ್ರಕರಣದಲ್ಲಿ ಸಾಕ್ಷಿ-ದೂರುದಾರರು ತೋರಿಸಿರುವ 13 ಸ್ಥಳಗಳ ಪೈಕಿ ಈಗಾಗಲೇ 12 ಸ್ಥಳಗಳಲ್ಲಿ ಅಗೆಯುವ ಕಾರ್ಯ ಪೂರ್ಣಗೊಂಡಿದ್ದು, ಜುಲೈ 31 ರಂದು 6ನೇ ಸ್ಥಳದಲ್ಲಿ ಮಾತ್ರ ಮಾನವ ಅವಶೇಷಗಳು ಕಂಡುಬಂದಿವೆ. ಆಗಸ್ಟ್ 5 ರಂದು, ಎಸ್‌ಐಟಿ 11 ಮತ್ತು 12ನೇ ಸ್ಥಳದಲ್ಲಿ ಅಗೆದಿತ್ತು. ಆದರೆ, ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.
ಸಾಕ್ಷಿ-ದೂರುದಾರ ಇದುವರೆಗೆ ಗುರುತಿಸಿದ್ದ 13ನೇ ಜಾಗವನ್ನು ಹೊರತುಪಡಿಸಿ, ಉಳಿದೆಲ್ಲ ಸ್ಥಳಗಳಲ್ಲಿ ಎಸ್ಐಟಿ ಶೋಧ ಕಾರ್ಯ ಪೂರ್ಣಗೊಳಿಸಿದೆ. ದೂರುದಾರ ತೋರಿಸಿದ್ದ ಜಾಗಗಳ ಹೊರತಾಗಿಯೂ, ಸೋಮವಾರ ತೋರಿಸಿದ್ದ ಹೊಸ ಜಾಗದಲ್ಲೂ ಶೋಧ ಕಾರ್ಯ ನಡೆಸಿದೆ.
ದೂರುದಾರ ಗುರುತಿಸಿದ ಕೊನೆಯ 13ನೇ ಸ್ಥಳದಲ್ಲಿ ಅಗೆಯುವ ಕಾರ್ಯ ಇನ್ನೂ ಬಾಕಿ ಇದೆ ಮತ್ತು ಅದರ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.