ಬೆಂಗಳೂರು: ಆನ್‌ಲೈನ್ ಡೇಟಿಂಗ್ ವಂಚನೆ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚುತ್ತಿದ್ದು, ವಂಚಕರು ಭಾವನಾತ್ಮಕವಾಗಿ ದುರ್ಬಲ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಅವರನ್ನು ಅತ್ಯಾಧುನಿಕ ಆರ್ಥಿಕ ವಂಚನೆಗಳಿಗೆ ಸೆಳೆಯುತ್ತಿದ್ದಾರೆ. ಆನ್ ಲೈನ್ ಡೇಟಿಂಗ್ ಎಂದು ನಗರವಾಸಿಗಳು ಪ್ರೀತಿಯ ಹುಡುಕಾಟದಲ್ಲಿ ವಂಚನೆಕ್ಕೊಳಗಾಗಿ ಹೃದಯಾಘಾತ ಮತ್ತು ಆರ್ಥಿಕ ನಾಶದಲ್ಲಿ ಕೊನೆಗೊಳ್ಳುತ್ತದೆ, ವಂಚಕರು ಬಲಿಪಶುಗಳನ್ನು ಸುಲಿಗೆ ಮಾಡಲು ಅಥವಾ ಅವರನ್ನು ಮೋಸದ ಹೂಡಿಕೆ ಯೋಜನೆಗಳಿಗೆ ಸೆಳೆಯಲು ಡೇಟಿಂಗ್ ಆಪ್ ಗಳನ್ನು ಬಳಸಿಕೊಳ್ಳುತ್ತಾರೆ.
ಇತ್ತೀಚೆಗೆ, 32 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ವೈವಾಹಿಕ ವೆಬ್‌ಸೈಟ್‌ನಲ್ಲಿ ಮಹಿಳೆಯೊಬ್ಬರ ಸಲಹೆಯನ್ನು ಅನುಸರಿಸಿ ನಕಲಿ ಟ್ರೇಡಿಂಗ್ ಅಪ್ಲಿಕೇಶನ್‌ನಲ್ಲಿ 79.3 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿ ಹಣ ಕಳೆದುಕೊಂಡರು. ಮತ್ತೊಂದು ಪ್ರಕರಣದಲ್ಲಿ, 37 ವರ್ಷದ ಉದ್ಯಮಿ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಮಹಿಳೆಯೊಂದಿಗೆ ಸಂಪರ್ಕ ಸಾಧಿಸಿ ನಂತರ ಸೆಕ್ಸ್‌ಟಾರ್ಷನ್ ಹಗರಣದಲ್ಲಿ 5.5 ಲಕ್ಷ ರೂಪಾಯಿಗಳನ್ನು ಕಳೆದುಕೊಂಡರು.
ಸೈಬರ್ ಅಪರಾಧ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಡೇಟಿಂಗ್ ವಂಚನೆಯು ಸಾಮಾನ್ಯವಾಗಿ ಎರಡು ವರ್ಗಗಳಲ್ಲಿ ಬರುತ್ತದೆ. ಹನಿ-ಟ್ರಾಪ್ ಸುಲಿಗೆ (ಸೆಕ್ಸ್‌ಟಾರ್ಷನ್) ಮತ್ತು ಹೂಡಿಕೆ ಅವಕಾಶಗಳ ಸೋಗಿನಲ್ಲಿ ಬಲಿಪಶುಗಳನ್ನು ಹಣವನ್ನು ವರ್ಗಾಯಿಸಲು ಮೋಸಗೊಳಿಸುವ ವ್ಯಾಪಾರ ಯೋಜನೆಯಾಗಿದೆ.
ಪುರುಷರ ಜೊತೆ ಮಹಿಳೆಯರು ಭಾವನಾತ್ಮಕವಾಗಿ ಸಂಭಾಷಣೆಗಳನ್ನು ಆರಂಭಿಸಿ ವಿಶ್ವಾಸವನ್ನು ಬೆಳೆಸುತ್ತಾರೆ, ಮದುವೆಯಾಗಿ ಉತ್ತಮ ಭವಿಷ್ಯ ಬೆಳೆಸಿಕೊಳ್ಳೋಣ ಎಂದು ಮಾತಿನಲ್ಲೇ ನಂಬಿಕೆ ಬರುವಂತೆ ಮಾಡುತ್ತಾರೆ. ಈ ರೀತಿ ಮಾತನಾಡುತ್ತಾ ಸಂಬಂಧ ಬೆಳೆಯುತ್ತಾ ಹೋದಂತೆ, ನಂತರ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಾರೆ. ಹಣ ಹೂಡಿಕೆ ಮಾಡುವವರ ಆರ್ಥಿಕ ಹಿನ್ನೆಲೆ, ಅವರ ಆರ್ಥಿಕ ತೊಂದರೆಗಳನ್ನು ಬಂಡವಾಳವಾಗಿಸಿ ಹೂಡಿಕೆ ಮಾಡುವಂತೆ ಒತ್ತಾಯಿಸಿ ಈ ಮೂಲಕ ಮೋಸದ ಜಾಲಕ್ಕೆ ಬೀಳಿಸುತ್ತಾರೆ.
ಜನರು ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ವೈಯಕ್ತಿಕ ಅಥವಾ ಹಣಕಾಸಿನ ವಿವರಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸುವಂತೆ ಮತ್ತು ತ್ವರಿತ ಆರ್ಥಿಕ ಲಾಭವನ್ನು ತಂದುಕೊಡುವ ಭರವಸೆ ನೀಡುವರಿಂದ ಜಾಗರೂಕರಾಗಿರಿ ಎಂದು ಪೊಲೀಸರು ಎಚ್ಚರಿಸುತ್ತಾರೆ.