ಮಂಗಳೂರು: ಸಾಕ್ಷಿ-ದೂರುದಾರರು ತೋರಿಸಿರುವ ಸ್ಥಳ 13 ರಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ವ್ಯವಸ್ಥೆ ಮತ್ತು ಡ್ರೋನ್ ಮೌಂಟೆಡ್ ರಾಡಾರ್‌ಗಳನ್ನು ಬಳಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ವಿಶೇಷ ತನಿಖಾ ತಂಡ (SIT, ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿದೆ.
ಪ್ರಕರಣದ ಮೇಲ್ವಿಚಾರಣೆಗಾಗಿ ಬೆಳ್ತಂಗಡಿಯಲ್ಲಿರುವ SIT ಮುಖ್ಯಸ್ಥ ಡಿಜಿಪಿ ಪ್ರಣಬ್ ಮೊಹಾಂತಿ ಅವರು, ಪಾಯಿಂಟ್ 13 ರ ಸಮೀಪ ವಿದ್ಯುತ್ ತಂತಿಗಳು ಮತ್ತು ಈ ಸ್ಥಳವು ಮುಖ್ಯ ರಸ್ತೆಗೆ ವಿಸ್ತರಿಸಿರುವುದರಿಂದ ರಾಡಾರ್ ವ್ಯವಸ್ಥೆ ಬಳಸುವ ಮೊದಲು ತಜ್ಞರ ಅಭಿಪ್ರಾಯ ಪಡೆಯುವ ಸಾಧ್ಯತೆಯಿದೆ ಎಂದು SIT ಯ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.
ಸಮಾಧಿ ಸ್ಥಳ ಸಂಖ್ಯೆ 13 ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಗೃಹದ ಸುತ್ತಮುತ್ತಲಿನ ಮುಖ್ಯ ರಸ್ತೆಯ ಹತ್ತಿರದಲ್ಲಿದೆ.
ದೂರುದಾರನ ನಂಬಿಕೆಯಂತೆ 13ನೇ ಸ್ಥಳದಲ್ಲಿ ಬಹಳಷ್ಟು ಶವ ಹೂತಿದ್ದು, ಇಲ್ಲಿ ಅಸ್ಥಿಪಂಜರ ಸಿಗುವ ಸಾಧ್ಯತೆ ಇದೆ ಎಂದಿದ್ದಾನೆ. ಈ ಹಿಂದೆ 12 ಸ್ಥಳಗಳಲ್ಲಿ ಶೋಧ ನಡೆಸಿದರೂ, ಒಂದೆರಡು ಕಡೆ ಬಿಟ್ಟರೆ ಬೇರೆ ಕುರುಹು ಸಿಕ್ಕಿರಲಿಲ್ಲ. ಹೀಗಾಗಿ ದೂರುದಾರನ ನಡೆಯ ಬಗ್ಗೆ ಈಗ ಅನುಮಾನಗಳು ವ್ಯಕ್ತವಾಗಿವೆ.
ಎಸ್‌ಐಟಿ ಇಂದು 13ನೇ ಸ್ಥಳದ ಬದಲು 14 ನೇ ಸ್ಥಳವನ್ನು ಅಗೆಯುತ್ತಿದೆ. ಇದು 11ನೇ ಸ್ಥಳದಿಂದ ಸುಮಾರು 80 ಮೀಟರ್ ದೂರದಲ್ಲಿದೆ.