ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಬಳಿ ಯೂಟ್ಯೂಬರ್‌ಗಳ ಮೇಲೆ ದುಷ್ಕರ್ಮಿಗಳ ಗುಂಪೊಂದು ನಿನ್ನೆ ಬುಧವಾರ ಸಂಜೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಯೂಟ್ಯೂಬರ್ ಗಳ ಮೇಲೆ ಹಲ್ಲೆ ನಡೆದ ಘಟನೆಯನ್ನು ವರದಿ ಮಾಡಲು ಹೋಗಿದ್ದ ಸುದ್ದಿವಾಹಿನಿಯ ಇಬ್ಬರು ವರದಿಗಾರರ ಮೇಲೆ ಕೂಡ ದಾಳಿಯಾಗಿದ್ದು ಈ ಘಟನೆಯ ನಂತರ, ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆಂದು ಆರೋಪಿಸಿ ಯೂಟ್ಯೂಬರ್‌ಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಈ ವೇಳೆ ವರದಿ ಮಾಡಲು ಹೋದ ಖಾಸಗಿ ವಾಹಿನಿ ವರದಿಗಾರ ಹಾಗೂ ಕ್ಯಾಮೆರಾಮ್ಯಾನ್ ಮೇಲೂ ಹಲ್ಲೆ ನಡೆಸಲಾಗಿದೆ.
ಧರ್ಮಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಧರ್ಮಸ್ಥಳದಲ್ಲಿ ಎಸ್ ಐಟಿ ಅಧಿಕಾರಿಗಳಿಂದ ಶವಶೋಧ ವಿಚಾರದಲ್ಲಿ ಪರ-ವಿರೋಧ ಗುಂಪುಗಳ ನಡುವೆ ವಾಗ್ಯುದ್ಧ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದು, ನಿನ್ನೆ ಸಂಜೆ ಈ ಜಟಾಪಟಿ ತಾರಕಕ್ಕೇರಿದೆ.
ನಿನ್ನೆ ಆಗಿದ್ದೇನು?
ಧರ್ಮಸ್ಥಳ ಸುತ್ತಮುತ್ತ ಶವಗಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿರುವುದರ ಮಧ್ಯೆ, ನಿನ್ನೆ ಸಂಜೆ ಧರ್ಮಸ್ಥಳದ ಬಳಿ ಒಬ್ಬ ವ್ಯಕ್ತಿಯನ್ನು ಯೂಟ್ಯೂಬರ್ ಸಂದರ್ಶಿಸುತ್ತಿದ್ದಾಗ, ಕ್ಯಾಮೆರಾಮನ್ ಸೇರಿದಂತೆ ಮೂರು ಯೂಟ್ಯೂಬ್ ಚಾನೆಲ್‌ಗಳನ್ನು ಪ್ರತಿನಿಧಿಸುವ ನಾಲ್ವರ ಮೇಲೆ ಸ್ಥಳೀಯ ಗುಂಪೊಂದು ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2 ಎಫ್ ಐಆರ್ ದಾಖಲು
ಜಿಲ್ಲಾ ಪೊಲೀಸರ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಥಮ ಮಾಹಿತಿ ವರದಿಗಳು (FIR) ದಾಖಲಾಗಿವೆ. ಒಂದು ಎಫ್‌ಐಆರ್, ಯೂಟ್ಯೂಬರ್‌ಗಳ ಗುಂಪಿನ ಮೇಲೆ ನಡೆದ ಹಲ್ಲೆ ಮತ್ತು ಅವರ ಎರಡು ವಾಹನಗಳಿಗೆ ಹಾನಿ ಮಾಡಿದ ಆರೋಪಕ್ಕೆ ಸಂಬಂಧಿಸಿದೆ. ಅದೇ ದೂರಿನಲ್ಲಿ ಖಾಸಗಿ ಸುದ್ದಿ ವಾಹಿನಿಯ ವರದಿಗಾರನ ಮೇಲಿನ ಹಲ್ಲೆಯೂ ಸೇರಿದೆ.
ಧರ್ಮಸ್ಥಳದ ಬಳಿಯ ಪಾಂಗಾಳದಲ್ಲಿ ಕಾನೂನುಬಾಹಿರವಾಗಿ ಗುಂಪು ಸೇರಿದ್ದಕ್ಕಾಗಿ ಎರಡನೇ ಪ್ರಕರಣ ದಾಖಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಆವರಣದಲ್ಲಿ ಮತ್ತು ಸ್ಥಳೀಯ ಆಸ್ಪತ್ರೆಯ ಮುಂದೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಘಟನೆಯ ನಂತರ ಕರೆತರಲಾದವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಪ್ರಾಥಮಿಕ ವೈದ್ಯಕೀಯ ಮೌಲ್ಯಮಾಪನಗಳ ಆಧಾರದ ಮೇಲೆ, ಗಾಯಾಳುಗಳಲ್ಲಿ ಯಾರಿಗೂ ಗಂಭೀರ ಹಾನಿಯಾಗಿಲ್ಲ ಎಂದು ಮೌಖಿಕವಾಗಿ ದೃಢಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಭಾಗವಾಗಿ ಘಟನಾ ಸ್ಥಳದಿಂದ ವಿಡಿಯೊ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಸಂಶೋಧನೆಗಳ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಎಸ್‌ಪಿ ಆಗಮನ
ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ, ಧರ್ಮಸ್ಥಳ ಪೊಲೀಸ್ ಠಾಣೆಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಡಾ. ಅರುಣ್ ಕುಮಾರ್ ಭೇಟಿ ನೀಡಿದರು. ಧರ್ಮಸ್ಥಳದ ಗ್ರಾಮಸ್ಥರು, ಶ್ರೀಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಪ್ರಮುಖರ ಜೊತೆ ಎಸ್‌ಪಿ ಮಾತುಕತೆ ನಡೆಸಿದರು.
ನಾಲ್ವರ ವಿರುದ್ಧ FIR
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಎಂ ಡಿ, ಮಹೇಶ್ ತಿಮರೋಡಿ ಸೇರಿದಂತೆ ನಾಲ್ವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಯೂಟ್ಯೂಬರ್ಸ್ ಮೇಲೆ ಹಲ್ಲೆಯ ಸುದ್ದಿ ಕೇಳಿ ಹೋಗಿದ್ದ ಸುದ್ದಿವಾಹಿನಿಯ ವರದಿಗಾರರ ತಂಡದ ಮೇಲೆ ಉಜಿರೆಯ ಬೆನಕ ಆಸ್ಪತ್ರೆಯ ಮುಂಭಾಗ ಹಲ್ಲೆ ನಡೆದಿತ್ತು. ಇಬ್ಬರ ಮೇಲೆ ಮಹೇಶ್ ತಿಮರೋಡಿ ಬೆಂಬಲಿಗರಿಂದ ಹಲ್ಲೆಯಾಗಿದೆ. ಹರೀಶ್ ಎಂಬುವವರು ನೀಡಿದ ದೂರಿನಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮಹೇಶ್ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್, ಸಮೀರ್ ಎಂ ಡಿ, ಜಯಂತ್ ಟಿ ಸೇರಿ ಹಲವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ ಸುತ್ತಮುತ್ತ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.