ಮಂಗಳೂರು: ನನಗೆ ಜೀವ ಬೆದರಿಕೆಯಿದ್ದು, ಗನ್ ಮ್ಯಾನ್ ಹಾಗೂ ಭದ್ರತೆ ಒದಗಿಸಿ ಎಂದು ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಸಾಕ್ಷಿ-ದೂರುದಾರ ವ್ಯಕ್ತಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಮುಂದೆ ಮನವಿ ಮಾಡಿದ್ದಾನೆಂದು ತಿಳಿದುಬಂದಿದೆ.
ಸಾಕ್ಷಿ ಹಾಗೂ ದೂರುದಾರ ವ್ಯಕ್ತಿ ವೈಯಕ್ತಿಕ ಭದ್ರತೆ/ಗನ್ ಮ್ಯಾನ್ ಒದಗಿಸುವಂತೆ ಮನವಿ ಮಾಡಿದ್ದು, ಈಗಾಗಲೇ ಅವರಿಗೆ ಭದ್ರತೆ ಒದಗಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ರಕ್ಷಣೆ ಒದಗಿಸಿದ್ದಾರೆಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ.
ಸಾಕ್ಷಿ-ದೂರುದಾರರ ವ್ಯಕ್ತಿ ಮಾಜಿ ಪೌರ ಕಾರ್ಮಿಕನಾಗಿದ್ದು, ದಶಕದ ಹಿಂದೆ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರ ಮತ್ತು ಹತ್ಯೆಯಾದವರ ಶವಗಳನ್ನು ಅಂತ್ಯಕ್ರಿಯೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ವ್ಯಕ್ತಿ ಅಂತ್ಯಕ್ರಿಯೆ ಮಾಡಿದ 13 ಸ್ಥಳಗಳನ್ನು ಗುರ್ತಿಸಿದ್ದು, 12 ಸ್ಥಳಗಳಲ್ಲಿ ಡಿಜಿಪಿ ಪ್ರಣಬ್ ಮೊಹಂತಿ ನೇತೃತ್ವದ ಎಸ್‌ಐಟಿ ಪರಿಶೀಲನೆ ಕಾರ್ಯವನ್ನು ಪೂರ್ಣಗೊಳಿಸಿದೆ. ಈ ಪೈಕಿ ಒಂದು ಸ್ಥಳದಲ್ಲಿ ಮಾತ್ರ ಅಸ್ತಿಪಂಜರ ಪತ್ತೆಯಾಗಿದೆ. ಕೊನೆಯ 13ನೇ ಸ್ಥಳದಲ್ಲಿ ಇನ್ನೂ ಕಾರ್ಯಾಚರಣೆ ಆರಂಭವಾಗಿಲ್ಲ.
ಏತನ್ಮಧ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಲಾಗಿದೆ ಎಂದು ತಿಳಿದಬಂದಿದೆ.
ಎಸ್ಐಟಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಿರುವ ಹಿನ್ನೆಲೆಯಲ್ಲಿ ಇದು ಎಫ್ಐಆರ್ ದಾಖಲಿಸಲು ಸಹಾಯ ಮಾಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈವರೆಗೂ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮೊದಲು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಿಸಬೇಕಿತ್ತು. ನಂತರ ಅದನ್ನು ಎಸ್ಐಟಿಗೆ ವರ್ಗಾಯಿಸಲಾಗುತ್ತಿತ್ತು. ಇದೀಗ ಎಸ್ಐಟಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಿರುವುದರಿಂದ ನೇರವಾಗಿ ಎಸ್ಐಟಿಯೇ ಪ್ರಕರಣ ದಾಖಲಿಸಿಕೊಳ್ಳಬಹುದಾಗಿದೆ.
ಪ್ರಸ್ತುತ ಎಸ್ಐಟಿಗೆ ಡಿಜಿಪಿ ಪ್ರಣಬ್ ಮೊಹಂತಿ ನೇತೃತ್ವ ವಹಿಸಿದ್ದು, ಡಿಐಜಿ ಎಂಎನ್ ಅನುಚೇತ್, ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಎಸ್ಐಟಿ ತಂಡದ ಭಾಗವಾಗಿದ್ದಾರೆ.