ಬೆಂಗಳೂರು: ಕೆಲ ಸಮಯಗಳ ಹಿಂದೆ ಆಟೋರಿಕ್ಷಾಗಳು 'ಚಾಲಕ ಪರವಾನಗಿ ಪ್ರದರ್ಶನ ವ್ಯವಸ್ಥೆ'ಯನ್ನು ಹೊಂದಿದ್ದವು, ಚಾಲಕರಿಂದ ಯಾವುದೇ ರೀತಿಯ ಕಿರುಕುಳ ತಪ್ಪಿಸಿ ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುವುದು ಇದರ ಉದ್ದೇಶ.
ಪ್ರಯಾಣಿಕರ ಸುರಕ್ಷತಾ ವೈಶಿಷ್ಟ್ಯವಾದ ಈ ವ್ಯವಸ್ಥೆಯನ್ನು 2004 ರಲ್ಲಿ ಬೆಂಗಳೂರಿನಲ್ಲಿ ಪರಿಚಯಿಸಲಾಯಿತು. ಇದು ಚಾಲಕನ ಹೆಸರು, ಫೋಟೋ, ಚಾಲನಾ ಪರವಾನಗಿ ವಿವರಗಳು, ವಿಳಾಸ, ಫೋನ್ ನಂಬರ್ ಮತ್ತು ರಕ್ತದ ಗುಂಪನ್ನು ತೋರಿಸುತ್ತಿತ್ತು. ಹೆಚ್ಚಿನ ಆಟೋಗಳು ಬೋರ್ಡ್‌ಗಳನ್ನು ಹಾಕಿರುತ್ತಿದ್ದವು. ಚಾಲಕರು ನಿಯಮಗಳನ್ನು ಪಾಲಿಸುವಂತೆ ಮತ್ತು ಮೀಟರ್ ಪ್ರಕಾರ ಸವಾರಿ ನಡೆಸುವುದು ಇದರ ಉದ್ದೇಶವಾಗಿತ್ತು. ಪ್ರಯಾಣಿಕರು ಒಂದು ವೇಳೆ ದೂರು ನೀಡಿದರೆ ಚಾಲಕರನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಈ ಬೋರ್ಡ್ ಗಳು ಸಹಾಯವಾಗುತ್ತಿತ್ತು.
ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಆಟೋಚಾಲಕರು ಈ ಬೋರ್ಡ್‌ಗಳನ್ನು ಪ್ರದರ್ಶಿಸುವುದಿಲ್ಲ, ಯಾವುದೇ ಅಹಿತಕರ ಘಟನೆಯ ಸಂದರ್ಭದಲ್ಲಿ ದೂರುಗಳನ್ನು ಸಲ್ಲಿಸಲು ಪ್ರಯಾಣಿಕರಿಗೆ ಆಟೋ ನೋಂದಣಿ ಸಂಖ್ಯೆಯನ್ನು ನೀಡುವುದು ಮಾತ್ರ ಏಕೈಕ ಆಯ್ಕೆಯಾಗಿ ಉಳಿದಿದೆ. ಆಟೋಗಳಲ್ಲಿ ಫಲಕ ನಾಪತ್ತೆಯಾಗುತ್ತಿದೆ.
ಬೋರ್ಡ್‌ಗಳು ಇದ್ದಾಗ, ಚಾಲಕರು ಮೀಟರ್ ಮೂಲಕ ದರ ಹಾಕಬೇಕಾಗುತ್ತದೆ. ಪ್ರಯಾಣಿಕರನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ. ಆದರೆ ಈ ಬೋರ್ಡ್‌ಗಳಿಲ್ಲದೆ, ಚಾಲಕರು ಬೇಕಾಬಿಟ್ಟಿ ಆಟೋಚಾರ್ಜ್ ಹಾಕುತ್ತಾರೆ ಎಂದು ಖಾಸಗಿ ಕಂಪನಿ ಉದ್ಯೋಗಿ ಶರತ್ ಕುಮಾರ್ ಕೆಪಿ ಹೇಳುತ್ತಾರೆ.
ಬೋರ್ಡ್ ಪ್ರದರ್ಶನ ಆರಂಭ
ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟವು ಬೋರ್ಡ್ ಪ್ರದರ್ಶನವನ್ನು ಕಡ್ಡಾಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2000 ಇಸವಿಯ ಆರಂಭದಲ್ಲಿ ರಾಜರಾಜೇಶ್ವರಿ ನಗರದಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದ ನಂತರ ಅವರು ಈ ಆಲೋಚನೆಯನ್ನು ಮುಂದಿಟ್ಟರು ಎಂದು ಅದರ ಅಧ್ಯಕ್ಷ ಮಂಜುನಾಥ್ ಎಂ ಹೇಳುತ್ತಾರೆ.
ಅಂದು ಏನಾಗಿತ್ತು?
ಒಬ್ಬ ಯುವಕ ತನ್ನ ಸ್ನೇಹಿತನ ಆಟೋವನ್ನು ಎರವಲು ಪಡೆದು, ಸಿರ್ಸಿ ವೃತ್ತದಿಂದ ವಿದೇಶಿ ಪ್ರಯಾಣಿಕ ಮಹಿಳೆಯನ್ನು ಕರೆದುಕೊಂಡು ಹೋಗಿ, ನಿರ್ಜನ ಸ್ಥಳಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಪೊಲೀಸರು ಪ್ರಕರಣವನ್ನು ಪರಿಹರಿಸಲು ಸಾಕಷ್ಟು ಕಷ್ಟಪಟ್ಟಿದ್ದರು.
ಚಾಲನಾ ಪರವಾನಗಿ ಪ್ರದರ್ಶನ ಆಟೋದಲ್ಲಿ ಇರುತ್ತಿದ್ದರೆ ಫಲಕದಲ್ಲಿ ಪ್ರದರ್ಶಿಸಲಾದ ಚಾಲಕನಿಗಿಂತ ವ್ಯಕ್ತಿ ಬೇರೆ ಎಂದು ಮಹಿಳೆ ಪ್ರಯಾಣಿಸುವುದನ್ನು ನಿರಾಕರಿಸಬಹುದಿತ್ತು ಎನ್ನುತ್ತಾರೆ ಅವರು. ಇತ್ತೀಚೆಗೆ ಪ್ರದರ್ಶನ ಫಲಕ ಸ್ಥಗಿತದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮಂಜುನಾಥ್, ಈ ವ್ಯವಸ್ಥೆಯ ಮೂಲಕ, ಪೊಲೀಸರು ನಿಜವಾದ ಪರವಾನಗಿ ಹೊಂದಿರುವವರು ಮಾತ್ರ ಆಟೋಗಳನ್ನು ಓಡಿಸುವುದನ್ನು ಖಚಿತಪಡಿಸಿಕೊಳ್ಳಬಹುದು. ಇದು ಚಾಲಕರನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ, ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುತ್ತದೆ ಎಂದರು.
ಒಕ್ಕೂಟ ಮುಖ್ಯಸ್ಥರು ಏನಂತಾರೆ?
ಇದಕ್ಕೆ ವ್ಯತಿರಿಕ್ತವಾಗಿ, ಆಟೋರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ, ನಗರದಲ್ಲಿ ಹೆಚ್ಚಿನ ಆಟೋ ಸವಾರಿಗಳು ಖಾಸಗಿ ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳ ಮೂಲಕ ನಡೆಯುತ್ತವೆ, ಅಲ್ಲಿ ಎಲ್ಲಾ ವಿವರಗಳು ಲಭ್ಯವಿದೆ ಎನ್ನುತ್ತಾರೆ.
ಆಟೋ ಚಾಲಕ ಜಯರಾಮ್, ನ್ಯಾಯಾಲಯದಲ್ಲಿ ಹೋರಾಡಿ ಪ್ರಕರಣವನ್ನು ಗೆದ್ದಿದ್ದೇನೆ ಎಂದು ಹೇಳಿದರು. ಮೋಟಾರು ವಾಹನ ನಿಯಮಗಳು ಬೋರ್ಡ್ ಹಾಕುವುದನ್ನು ಕಡ್ಡಾಯಗೊಳಿಸುವುದಿಲ್ಲ. ಬೋರ್ಡ್ ಪ್ರದರ್ಶಿಸದಿದ್ದಕ್ಕಾಗಿ ದಂಡ ವಿಧಿಸಲು ಸಂಚಾರ ಪೊಲೀಸರಿಗೆ ಅಧಿಕಾರವಿಲ್ಲ ಎಂದರು.
ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, ವಾಹನದ ನೋಂದಣಿ ಸಂಖ್ಯೆ ಸಾಕು ಎಂದು ರುದ್ರ ಮೂರ್ತಿ ಮತ್ತು ಜಯರಾಮ್ ಇಬ್ಬರೂ ಹೇಳುತ್ತಾರೆ.
ಸಾರಿಗೆ ಸಚಿವರು ಏನಂತಾರೆ?
ಚಾಲನಾ ಪರವಾನಗಿ ಪ್ರದರ್ಶನ ವ್ಯವಸ್ಥೆಗಳನ್ನು ಏಕೆ ಜಾರಿಗೊಳಿಸಲಾಗಿಲ್ಲ ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲಿಸುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.